ಬೆಂಗಳೂರು: ದೇಶದಲ್ಲಿ ಒಂದು ಸಿಮ್ ಕಾರ್ಡ್ ಖರೀದಿ ಮಾಡುವುದರಿಂದ ಹಿಡಿದು, ಸರ್ಕಾರದ ಯಾವುದೇ ಯೋಜನೆಯ ಲಾಭ ಪಡೆಯಬೇಕು ಎಂದರೆ, ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಆದರೆ, ಆಧಾರ್ ಕಾರ್ಡ್ ನಲ್ಲಿ ಕೆಲವೊಂದು ಸಲ ಹೆಸರು, ಸ್ಪೆಲ್ಲಿಂಗ್ ಬದಲಾವಣೆ ಮಾಡಬೇಕಿರುತ್ತದೆ. ವಿಳಾಸ ಬದಲಾವಣೆ ಸೇರಿ ವಿವಿಧ ಬದಲಾವಣೆ ಮಾಡಬೇಕಾಗಿರುತ್ತದೆ. ಆದರೆ, ಎಲ್ಲರಿಗೂ ಆನ್ ಲೈನ್ ಮೂಲಕವೇ ತಿದ್ದುಪಡಿ ಮಾಡಲು ಬರುವುದಿಲ್ಲ. ಇನ್ನೂ ಕೆಲವರಿಗೆ ಅಗತ್ಯ ಮಾಹಿತಿ ಇರುವುದಿಲ್ಲ. ಹೀಗೆ, ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಟೋಲ್ ಫ್ರೀ ನಂಬರ್ ನೀಡಲಾಗಿದೆ. ಅದಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.
ಹೌದು, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)ವು ಆಧಾರ್ ಕಾರ್ಡಿಗೆ ಸಂಬಂಧಿತ ಪ್ರಶ್ನೆಗಳು ಮತ್ತು ಕುಂದುಕೊರತೆಗಳನ್ನು ಪರಿಹರಿಸಲು ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ 1947 ಅನ್ನು ಹೊಂದಿದೆ. ಇದರಲ್ಲಿ ಆಧಾರ್ ಗೆ ಸಂಬಂಧಿತ ಹೆಚ್ಚು ಕಡಿಮೆ ಎಲ್ಲ ಮಾಹಿತಿಯನ್ನು ಪಡೆಯಬಹುದಾಗಿದೆ.
ಉದಾಹರಣೆಗೆ, ಆಧಾರ್ ದಾಖಲಾತಿ ಅಥವಾ ನವೀಕರಣ ಸ್ಥಿತಿಯ ಪರಿಶೀಲನೆ, ಆಧಾರ್ ಸಂಖ್ಯೆ ಪರಿಶೀಲನೆ, ಹೆಸರು, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ ಮತ್ತು ವಿಳಾಸದಂತಹ ವಿವರಗಳನ್ನು ನವೀಕರಿಸುವ ಕುರಿತು ಮಾರ್ಗದರ್ಶನ, ಆಧಾರ್ ದಾಖಲಾತಿ ಕೇಂದ್ರಗಳನ್ನು ಪತ್ತೆಹಚ್ಚಲು ಮತ್ತು ಅಪಾಯಿಂಟ್ಮೆಂಟ್ಗಳನ್ನು ಕಾಯ್ದಿರಿಸಲು ಸಹಾಯ, ಕುಂದುಕೊರತೆಗಳನ್ನು ನೋಂದಾಯಿಸುವುದು ಮತ್ತು ಅವುಗಳ ಸ್ಥಿತಿಯನ್ನು ಟ್ರ್ಯಾಕ್ ಮಾಡುವುದು ಸೇರಿ ಹತ್ತಾರು ವಿಷಯಗಳ ಕುರಿತು ಮಾಹಿತಿ ಪಡೆಯಬಹುದಾಗಿದೆ.
1947 ಸಹಾಯವಾಣಿಯು ಸ್ವಯಂ ಸೇವಾ ಇಂಟರ್ ಆ್ಯಕ್ಟಿವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟಮ್ (ಐ ವಿ ಆರ್ ಎಸ್) ಮತ್ತು ಆಧಾರ್ ಕೇರ್ ಎಕ್ಸಿಕ್ಯೂಟಿವ್ ಗಳೊಂದಿಗಿನ ಸಂವಹನಕ್ಕೆ ಅವಕಾಶ ಕಲ್ಪಿಸುತ್ತದೆ. ಹಿಂದಿ, ಇಂಗ್ಲಿಷ್, ಕನ್ನಡ ಸೇರಿ ದೇಶದ 12 ಪ್ರಾದೇಶಿಕ ಭಾಷೆಗಳಲ್ಲೂ ಸೇವೆ ಲಭ್ಯವಿದೆ. ಸಹಾಯವಾಣಿಯ ಪ್ರತಿನಿಧಿಗಳೊಂದಿಗೆ ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 7 ರಿಂದ ರಾತ್ರಿ 11 ರವರೆಗೆ ಮತ್ತು ಭಾನುವಾರ ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ಮಾತ್ರ ಸಂವಹನ ನಡೆಸಬಹುದು. ಇದರ ಜತೆಗೆ ಎಐ ಆಧಾರಿತ ಆಧಾರ್ ಮಿತ್ರ ಎಂಬ ಚಾಟ್ ಬಾಟ್ ಕೂಡ ಇದೆ. ಅಲ್ಲಿ ಚಾಟ್ ಮಾಡುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದು.