ಕೇಂದ್ರ ಸರ್ಕಾರಿ ನೌಕರರ ಸಂಬಳದಲ್ಲಿ ಭಾರಿ ಏರಿಕೆಯಾಗುವ ಕಾರಣ 8ನೇ ವೇತನ ಆಯೋಗದ ರಚನೆಯು ಪ್ರಾಮುಖ್ಯತೆ ಪಡೆದಿದೆ. ನೌಕರರು ಆಯೋಗದ ರಚನೆಯ ಅಧಿಸೂಚನೆ ಬಗ್ಗೆ ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ 8ನೇ ವೇತನ ಆಯೋಗದ ರಚನೆಗೆ ಕಳೆದ ಜನವರಿಯಲ್ಲೇ ಅನುಮೋದನೆ ನೀಡಿದರೂ ಇದುವರೆಗೆ ಆಯೋಗ ರಚನೆಯಾಗಿಲ್ಲ. ಇದರ ಬೆನ್ನಲ್ಲೇ, ವಿಳಂಬದ ಕುರಿತು ಕೇಂದ್ರ ಸರ್ಕಾರವು ಸ್ಪಷ್ಟನೆ ನೀಡಿದೆ. ಹಾಗಾಗಿ, ನೌಕರರಲ್ಲಿ ಹೊಸ ಆಶಾಭಾವ ಮೂಡಿದೆ.
ನೂತನ ವೇತನ ಆಯೋಗದ ರಚನೆ ಕುರಿತು ರಾಜ್ಯಸಭೆಯಲ್ಲಿಕೇಳಿದ ಪ್ರಶ್ನೆಗೆ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಸ್ಪಷ್ಟನೆ ನೀಡಿದ್ದಾರೆ. ಮೊದಲು ವೇತನ ಆಯೋಗದ ರಚನೆ ಕುರಿತು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುತ್ತದೆ. ಇದಾದ ನಂತರ ಆಯೋಗದ ಚೇರ್ಮನ್ ಹಾಗೂ ಸದಸ್ಯರನ್ನು ನೇಮಕ ಮಾಡಲಾಗುತ್ತದೆ. ಎಂದು ಸಚಿವ ತಿಳಿಸಿದ್ದಾರೆ.
ಎಂಟನೇ ವೇತನ ಆಯೋಗದ ರಚನೆ ಕುರಿತು ಕೇಂದ್ರ ಸರಕಾರ ಈಗಾಗಲೇ ಅನುಮೋದನೆ ನೀಡಿದೆ. ವೇತನ ಆಯೋಗದ ರಚನೆ, ಅಧಿಸೂಚನೆ ಕುರಿತು ಪರಿಣತರು, ನೌಕರರ ಸಂಘಟನೆಗಳಿಂದ ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ. ಪ್ರಕ್ರಿಯೆ ಮುಗಿದ ಕೂಡಲೇ ಕೇಂದ್ರ ಸರಕಾರವು ಅಧಿಸೂಚನೆ ಹೊರಡಿಸಲಿದೆ ಎಂದು ಕೂಡ ಅವರು ಮಾಹಿತಿ ನೀಡಿದ್ದಾರೆ. ಆದರೆ, ಸರಕಾರ ಯಾವಾಗ ಅಧಿಸೂಚನೆ ಹೊರಡಿಸುತ್ತದೆ ಎಂಬ ಕುರಿತು ಪಂಕಚ್ ಚೌಧರಿ ಮಾಹಿತಿ ನೀಡಿಲ್ಲ.
8ನೇ ವೇತನ ಆಯೋಗ ಜಾರಿಯಾದರೆ 1.12 ಕೋಟಿ ನೌಕರರು ಹಾಗೂ ಪಿಂಚಣಿದಾರರಿಗೆ ಅನುಕೂಲವಾಗಲಿದೆ. ಕೇಂದ್ರ ಸರ್ಕಾರಿ ನೌಕರರ ಬೇಸಿಕ್ ಸಂಬಳ ಈಗ 50 ಸಾವಿರ ರೂ. ಇದೆ ಎಂದಿಟ್ಟುಕೊಳ್ಳಿ. ಇದಕ್ಕೆ 1.82 ಫಿಟ್ ಮೆಂಟ್ ಅನ್ವಯವಾದರೆ, ಅವರ ಬೇಸಿಕ್ ಸ್ಯಾಲರಿ 91 ಸಾವಿರ ರೂ. ಆಗುತ್ತದೆ. ಎಚ್ ಆರ್ ಎ 21,840 ರೂ., ಟಿಎ 2,457 ರೂ. ಸೇರಿ ಅವರ ಒಟ್ಟು ಸಂಬಳವು ಮಾಸಿಕ 1,15,297 ರೂ.ಗೆ ಏರಿಕೆಯಾಗುತ್ತದೆ ಎಂದು ತಿಳಿದುಬಂದಿದೆ.