ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ ಕಾಯಿಲೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಮಕ್ಕಳು ಪೂರ್ಣ ತೋಳಿನ ಸಮವಸ್ತ್ರ ಧರಿಸಬೇಕೆಂದು ದೆಹಲಿಯಲ್ಲಿ ಆದೇಶ ಹೊರಡಿಸಲಾಗಿದೆ.
ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಈ ಕುರಿತು ನಿರ್ಧಾರ ತೆಗೆದುಕೊಂಡಿದ್ದಾರೆ. ಎಲ್ಲ ಇಲಾಖೆಗಳ ಅಧಿಕಾರಿಗಳಿಂದ ಇದುವರೆಗೆ ನಡೆದಿರುವ ಸಿದ್ಧತೆಗಳ ಪರಿಶೀಲನೆ ನಡೆಸಿ ಎಲ್ಲ ಇಲಾಖೆಗಳಿಗೂ ಸೂಚನೆ ನೀಡಿದ್ದಾರೆ. ಅಲ್ಲದೇ, ಎಲ್ಲ ಮಕ್ಕಳು ವಾರಕ್ಕೊಮ್ಮೆ ತಮ್ಮ ಮನೆ, ಮಡಕೆಗಳನ್ನು ಪರಿಶೀಲಿಸಿ ಎಲ್ಲೆಂದರಲ್ಲಿ ನೀರು ಸಂಗ್ರಹವಾಗಿದೆಯೇ, ಸೊಳ್ಳೆ ಉತ್ಪತ್ತಿಯಾಗುವ ಸಾಧ್ಯತೆ ಇದೆಯೇ ಎಂಬುದನ್ನು ಪರಿಶೀಲಿಸಿ ಕಾರ್ಡ್ನಲ್ಲಿ ವಿವರ ಬರೆದು ಶಾಲೆಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ವಿದ್ಯಾರ್ಥಿಗಳು ಪೂರ್ಣ ತೋಳಿನ ಬಟ್ಟೆಗಳನ್ನು ಧರಿಸುವಂತೆ ಎಲ್ಲಾ ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಖಾಸಗಿ ಶಾಲೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಹಾಗೂ ಎಲ್ಲಾ ಮಕ್ಕಳು ಪೂರ್ಣ ತೋಳಿನ ಬಟ್ಟೆ ಧರಿಸಿ ಬರುವಂತೆ ನೋಡಿಕೊಳ್ಳುವಂತೆ ಆರೋಗ್ಯ ಇಲಾಖೆಗೆ ಸಚಿವ ಸೌರಭ್ ಭಾರದ್ವಾಜ್ ಹೇಳಿದ್ದಾರೆ. ಅಲ್ಲದೇ, ಕಾಯಿಲೆಗಳ ಗಂಭೀರತೆ ಬಗ್ಗೆ ಜಾಗೃತಿ ಮೂಡಿಸುವಂತೆ ಸೂಚಿಸಿದ್ದಾರೆ.