ಬೆಂಗಳೂರು: ನಮ್ಮ ಮೆಟ್ರೋ, ಬೆಂಗಳೂರಿನ ಪ್ರಯಾಣಿಕರಿಗೆ ಜೀವನಾಡಿ. ಇದೇ ನಮ್ಮ ಮೆಟ್ರೋ ಇದೀಗ ಗುಡ್ನ್ಯೂಸ್ ಒಂದನ್ನ ನಗರದ ನಾಗರಿಕರಿಗೆ ನೀಡಲು ಮುಂದಾಗಿದ್ದು, ನಮ್ಮ ಮೆಟ್ರೋ ವಿಸ್ತರಣೆಗೆ ಸಿದ್ಧತೆಗಳು ಆರಂಭವಾಗಿದೆ. ಸದ್ಯ ಕನಕಪುರ ರಸ್ತೆಯ ಆರ್ಟ್ ಆಫ್ ಲೀವಿಂಗ್ ಸಮೀಪದಿಂದ ಕಾರ್ಯನಿರ್ವಹಣೆ ಮಾಡುತ್ತಿರುವ ನಮ್ಮ ಮೆಟ್ರೋ, ತುಮಕೂರು ರಸ್ತೆಯ ನಾಗಸಂದ್ರ ನಿಲ್ದಾಣದವರೆಗೂ ಪ್ರಯಾಣ ಮಾಡುತ್ತಿದೆ.
ಇದೀಗ ನಾಗಸಂದ್ರದಿಂದ ನಮ್ಮ ಮೆಟ್ರೋ ವಿಸ್ತರಿಸಲು ನೀಲಿ ನಕ್ಷೆ ರೆಡಿಯಾಗುತ್ತಿದ್ದು, ಅದನ್ನು ತುಮಕೂರಿನ ಶಿರಾ ಗೇಟ್ವರೆಗೂ ವಿಸ್ತರಣೆ ಮಾಡುವ ಇರಾದೆ ಬಿಎಂಆರ್ಸಿಎಲ್ಗೆ ಇದೆ. ಸದ್ಯ ತುಮಕೂರು ಮಾರ್ಗದಲ್ಲಿ ವಾಹನ ದಟ್ಟನೆ ಹೆಚ್ಚಾಗಿದ್ದು, ಮೆಟ್ರೋ ವಿಸ್ತರಣೆ ಮಾಡಿದ್ರೆ ಅನುಕೂಲಗಳು ಹೆಚ್ಚಾಗಲಿದೆ ಎಂಬುದನ್ನು ಅರಿತ ಬಿಎಂಆರ್ಸಿಎಲ್ ವಿಸ್ತರಣೆಗೆ ನೀಲಿ ನಕ್ಷೆ ಸಿದ್ಧಪಡಿಸಿದೆ. ಬೆಂಗಳೂರಿನಿಂದ ತುಮಕೂರಿಗೆ 59.5 ಕಿಮೀ ಪ್ರಯಾಣ ಮಾಡಬೇಕಾಗಿದ್ದು, 25 ನಿಲ್ದಾಣವನ್ನು ನಿರ್ಮಿಸುವ ಗುರಿಯಿದೆ ಎಂದು ಬಿಎಂಆರ್ಸಿಎಲ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.