ನವದೆಹಲಿ: ಭಯೋತ್ಪಾದಕರೊಂದಿಗೆ ನಂಟು ಹೊಂದಿರುವ ಹಾಗೂ ಭಾರತದ ಮೋಸ್ಟ್ ವಾಂಟೆಡ್ ಗ್ಯಾಂಗ್ ಸ್ಟರ್ಗಳಲ್ಲಿ ಒಬ್ಬನಾದ ಹರ್ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಪಸಿಯಾನನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ. ಈತ ಈಗ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ಬಿಐ) ವಶದಲ್ಲಿದ್ದಾನೆ. ಪಂಜಾಬ್ನಲ್ಲಿ ನಡೆದ 14ಕ್ಕೂ ಅಧಿಕ ಉಗ್ರ ಕೃತ್ಯಗಳಲ್ಲಿ ಈತ ಪಾತ್ರ ವಹಿಸಿದ್ದ ಹಿನ್ನೆಲೆಯಲ್ಲಿ ಇವನು ಭಾರತೀಯ ಭದ್ರತಾ ಸಂಸ್ಥೆಗಳಿಗೆ ಬೇಕಾಗಿಲ್ಲ. ಈಗ ಅಮೆರಿಕದಲ್ಲಿ ಈತನ ಬಂಧನವಾಗಿರುವುದು ಭಾರತದ ಭದ್ರತಾ ಸಂಸ್ಥೆಗಳಿಗೂ ಸಿಕ್ಕ ಮಹತ್ವದ ಜಯವಾಗಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯು ಈ ಹಿಂದೆಯೇ ಪಸಿಯಾನ ತಲೆಗೆ 5 ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಿತ್ತು. ಈತ ಪಂಜಾಬ್ ಪೊಲೀಸರು ಮತ್ತು ಕೇಂದ್ರ ಗುಪ್ತಚರ ಘಟಕಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದ. ಅಮೆರಿಕದ ತನಿಖಾ ಸಂಸ್ಥೆ ಎಫ್ಬಿಐ ಮತ್ತು ಅಮೆರಿಕ ವಲಸೆ ಮತ್ತು ಕಸ್ಟಮ್ಸ್ ಜಾರಿ ಅಧಿಕಾರಿಗಳು ಸ್ಯಾಕ್ರಮೆಂಟೊದಲ್ಲಿ ಪಸಿಯಾನನ್ನು ಬಂಧಿಸಿದ್ದು, ಪೊಲೀಸರ ವಶದಲ್ಲಿರುವ ಆತನ ಮೊದಲ ಚಿತ್ರಗಳನ್ನೂ ಬಿಡುಗಡೆ ಮಾಡಲಾಗಿದೆ.
ಆತನ ಬಂಧನವನ್ನು ದೃಢಪಡಿಸಿ ಎಫ್ಬಿಐ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. “ಭಾರತದ ಪಂಜಾಬ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಕಾರಣನಾದ ಭಯೋತ್ಪಾದಕ ಹರ್ಪ್ರೀತ್ ಸಿಂಗ್ನನ್ನು ಎಫ್ಬಿಐ ಮತ್ತು ಇಆರ್ಒ ಸ್ಯಾಕ್ರಮೆಂಟೊದಲ್ಲಿ ಬಂಧಿಸಿದೆ. ಎರಡು ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿದ್ದ ಅವನು ಅಕ್ರಮವಾಗಿ ಅಮೆರಿಕಕ್ಕೆ ಪ್ರವೇಶಿಸಿದ್ದ. ತಾನು ಸಿಕ್ಕಿಹಾಕಿಕೊಳ್ಳಬಾರದು ಎಂದು ಬರ್ನರ್ ಫೋನ್ ಗಳನ್ನು ಬಳಸುತ್ತಿದ್ದ ಎಂದೂ ಎಫ್ಬಿಐ ತಿಳಿಸಿದೆ.

ಪಸಿಯಾ ಪಾಕಿಸ್ತಾನದ ಐಎಸ್ಐ ಮತ್ತು ಭಯೋತ್ಪಾದಕ ಸಂಘಟನೆಗಳಾದ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ) ಮತ್ತು ಹರ್ವಿಂದರ್ ಸಿಂಗ್ ರಿಂಡಾ ಜಾಲದೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ನಂಬಲಾಗಿದೆ. ಅಮೃತಸರದ ಗುಮ್ಟಾಲಾ ಪೊಲೀಸ್ ಠಾಣೆಯ ಬಳಿ 2025ರ ಜನವರಿಯಲ್ಲಿ ನಡೆದ ಸ್ಫೋಟ ಸೇರಿದಂತೆ ಪಂಜಾಬಲ್ಲಿ ಹಲವು ದಾಳಿಗಳನ್ನು ಯೋಜಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಆತ ಪ್ರಮುಖ ಪಾತ್ರ ವಹಿಸಿದ್ದ ಎಂದು ಗುಪ್ತಚರ ಸಂಸ್ಥೆಗಳು ಆರೋಪಿಸಿವೆ. ಸ್ಫೋಟದ ನಿಖರ ಕಾರಣ ಆ ಸಮಯದಲ್ಲಿ ಸ್ಪಷ್ಟವಾಗಿಲ್ಲವಾದರೂ, ಮಾರ್ಪಡಿಸಿದ ಕಾರ್ಬ್ಯುರೇಟರ್ ಸಾಧನದಿಂದ ದಾಳಿ ನಡೆಸಲಾಗಿತ್ತು ಎಂದು ಶಂಕಿಸಲಾಗಿದೆ.
ಆ ದಾಳಿಯ ಹೊಣೆ ಹೊತ್ತಿದ್ದ ಪಸಿಯಾ, ನಂತರದಲ್ಲೂ ತನ್ನ ಕುಟುಂಬದ ಮೇಲೆ ಪೊಲೀಸರ ಕ್ರಮಕ್ಕೆ ಪ್ರತೀಕಾರವಾಗಿ ಮತ್ತಷ್ಟು ದಾಳಿಗಳನ್ನು ನಡೆಸುವುದಾಗಿ ಬೆದರಿಕೆಯನ್ನೂ ಹಾಕಿದ್ದ. ಈಗ ಈತನ ಬಂಧನದಿಂದ ಭಾರತೀಯ ತನಿಖಾ ಸಂಸ್ಥೆಗಳಿಗೆ ದೊಡ್ಡ ತಲೆನೋವು ನಿವಾರಣೆಯಾದಂತಾಗಿದೆ.