ಬೆಂಗಳೂರು: ಕೇಂದ್ರ ಸರಕಾರವು ಜನಗಣತಿ ಜೊತೆಗೆ ಜಾತಿ ಗಣತಿ ಮಾಡಲು ಮುಂದಾಗಿರುವುದು ಸ್ವಾಗತಾರ್ಹ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್ ತಿಳಿಸಿದ್ದಾರೆ.
ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ಮಾಡಲು ಅಧಿಕಾರ ಇಲ್ಲದಿದ್ದರೂ ಸಾಮಾಜಿಕ ಮತ್ತು ಶೈಕ್ಷಣಿಕ ಸರ್ವೇ ಅಡಿಯಲ್ಲಿ ಜಾತಿ ಗಣತಿ ನಡೆದಿತ್ತು. ಆದರೆ, ಕರ್ನಾಟಕದಲ್ಲಿ ಈ ವಿಷಯದಲ್ಲಿ ಗೊಂದಲವಾಗಿತ್ತು. ಅದನ್ನು ಸರಿಯಾಗಿ ಮಾಡಿಲ್ಲ. ಕಾನೂನು ಬದ್ಧವಾಗಿ ಇಲ್ಲ. ಪ್ರತಿ ಮನೆಗೆ ಹೋಗಿಲ್ಲ ಹಾಗೂ ಎಲ್ಲ ಜಾತಿಯ ಗಣತಿ ಸರಿಯಾಗಿ ನಡೆದಿಲ್ಲ ಎಂಬ ಕೂಗು ಕೇಳಿಸಿತ್ತು ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಈ ವಿಷಯದಲ್ಲಿ ಗೊಂದಲ ನಿರ್ಮಾಣ ಮಾಡಿತ್ತು. ಸಮಾಜದಲ್ಲಿ ಗೊಂದಲ, ಜಾತಿಗಳ ನಡುವೆ ಗೊಂದಲಕ್ಕೆ ಕಾರಣವಾಗಿತ್ತು. ಇದಕ್ಕೆಲ್ಲ ಅಂತ್ಯ ಕಾಣಿಸಲು ಮತ್ತು ತೆರೆ ಎಳೆಯಲು ಕೇಂದ್ರ ಸರಕಾರ ಸ್ಪಷ್ಟ, ವೈಜ್ಞಾನಿಕ ಹಾಗೂ ಕಾನೂನುಬದ್ಧ, ಅಧಿಕಾರದ ಭಾಗವಾಗಿ ಜಾತಿ ಗಣತಿಯನ್ನು ಮಾಡಲಿದೆ. ವ್ಯವಸ್ಥಿತವಾಗಿ ಇದು ನಡೆಯಲಿದೆ ಎಂದು ತಿಳಿಸಿದರು.
ಸಮಾಜದ ಎಲ್ಲರ ಸ್ಥಿತಿಗತಿ ಗೊತ್ತಾಗಲಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಿಜೆಪಿ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.