ಬೆಂಗಳೂರು : ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 26 ರೋಗಿಗಳನ್ನು ಬೇರೆಡೆ ಶಿಫ್ಟ್ ಮಾಡಲಾಗಿದೆ.
ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿನ ಬೆಡ್ ಸೇರಿದಂತೆ ಕೆಲವು ವಸ್ತುಗಳು ಸುಟ್ಟು ಕರಕಲಾಗಿವೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಬೆಂಕಿ ಕಾಣಿಸಿಕೊಂಡ ಸ್ಥಳದಲ್ಲಿ ಫ್ರಿಡ್ಜ್ ಇದ್ದು, ಫ್ರಿಡ್ಜ್ ಗೆ ಬೆಂಕಿ ತಗುಲಿ ಅದು ಸುಟ್ಟಿದೆ.
ನಂತರ ಗಾಯಗಳ ವಿಭಾಗದ ಗ್ರೌಂಡ್ ಪ್ಲೋರ್ ಗೆ ಹೊಗೆ ಆವರಿಸಿದೆ. ಈ ಹಿನ್ನೆಲೆಯಲ್ಲಿ ಕೆಲ ಹೊತ್ತು ಸ್ಥಳದಲ್ಲಿ ಆತಂಕ ಆವರಿಸಿದ್ದು, ಸದ್ಯ ರೋಗಿಗಳನ್ನು ಬೇರೆಡೆ ಸ್ಥಳಾಂತಿರಸಲಾಗಿದೆ. ಬೆಂಕಿಯನ್ನು ಹತೋಟಿಗೆ ತರಲಾಗಿದೆ.
ವೈದ್ಯ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದಾಗಿ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ರಾತ್ರಿ ಪಾಳಿಯಲ್ಲಿದ್ದ ವೈದ್ಯೆ ದಿವ್ಯಾ ನೇತೃತ್ವದ ತಂಡ ಮಧ್ಯರಾತ್ರಿ 3.30ರ ವೇಳೆಗೆ ಮೊದಲ ಮಹಡಿಗೆ ಹೋಗಿದೆ. ಈ ವೇಳೆ ಸೆಮಿನಾರ್ ರೂಂನಲ್ಲಿ ಹೊಗೆ ಹಾಗೂ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಎಲ್ಲರನ್ನೂ ಅಲರ್ಟ್ ಮಾಡಿ ರಕ್ಷಣಾ ಕಾರ್ಯಾಚರಣೆ ನಡೆಯುವಂತೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಎಲ್ಲ ರೋಗಿಗಳನ್ನು ರಕ್ಷಿಸಿದ್ದಾರೆ. 30 ನಿಮಿಷಗಳಲ್ಲಿ ಎಲ್ಲ ರೋಗಿಗಳನ್ನು ಸ್ಥಳಾಂತರ ಮಾಡಲಾಗಿದೆ. ಐಸಿಯುನಲ್ಲಿದ್ದವರು ಸೇರಿ ಎಲ್ಲರನ್ನೂ ಶಿಫ್ಟ್ ಮಾಡಿ ಸಿಬ್ಬಂದಿ ದೊಡ್ಡ ಅನಾಹುತ ತಪ್ಪಿಸಿದೆ.
ಬೆಂಕಿ ಆವರಿಸಿದ ಸಂದರ್ಭದಲ್ಲಿ 14 ಜನ ಪುರುಷರು, ಐವರು ಮಹಿಳೆಯರು, 7 ಜನ ಮಕ್ಕಳು ಹಾಗೂ ಐವರು ರೋಗಿಗಳು ಐಸಿಯುನಲ್ಲಿದ್ದರು.