ನಾಂದೇಡ್ (ಮಹಾರಾಷ್ಟ್ರ): ವಿವಾಹಿತ ಮಹಿಳೆ ಮತ್ತು ಆಕೆಯ ಪ್ರಿಯಕರನ ಅಕ್ರಮ ಪ್ರೇಮ ಸಂಬಂಧ ಬಹಿರಂಗವಾಗುತ್ತಲೇ ಭೀಕರ ಮರ್ಯಾದಾ ಹತ್ಯೆಯೊಂದು ಮಹಾರಾಷ್ಟ್ರದ ನಾಂದೇಡ್‌ನಲ್ಲಿ ನಡೆದಿದೆ. ಸ್ವತಃ ಮಹಿಳೆಯ ತಂದೆಯೇ ಇಬ್ಬರನ್ನೂ ಕೊಂದು, ಶವಗಳನ್ನು ಬಾವಿಗೆ ಎಸೆದಿದ್ದಾರೆ.
ಸೋಮವಾರ, ಆಗಸ್ಟ್ 25 ರಂದು ಗೋಳೆಗಾಂವ್‌ನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯ ಪ್ರಿಯಕರ, ಆಕೆಯನ್ನು ಭೇಟಿಯಾಗಲು ಆಕೆಯ ಅತ್ತೆಯ ಮನೆಗೆ ಬಂದಿದ್ದ. ಈ ವೇಳೆ ಇಬ್ಬರೂ ಆಕ್ಷೇಪಾರ್ಹ ಸ್ಥಿತಿಯಲ್ಲಿ ಅತ್ತೆ-ಮಾವನ ಮುಂದೆ ಸಿಕ್ಕಿಬಿದ್ದಿದ್ದಾರೆ.
ತಕ್ಷಣವೇ ಅವರು ಮಹಿಳೆಯ ತಂದೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು, ತಂದೆ ಮತ್ತು ಇತರ ಇಬ್ಬರು ಸ್ಥಳಕ್ಕೆ ಧಾವಿಸಿದ್ದಾರೆ. ಅತ್ತೆ-ಮಾವನಿಂದ ವಿವರಗಳನ್ನು ಕೇಳಿದ ನಂತರ, ತಂದೆ ಮತ್ತು ಸಂಬಂಧಿಕರು ಮಹಿಳೆ ಹಾಗೂ ಆಕೆಯ ಪ್ರಿಯಕರನಿಗೆ ಅಮಾನವೀಯವಾಗಿ ಥಳಿಸಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯ ಪತಿಯೂ ಸ್ಥಳದಲ್ಲಿದ್ದ ಎಂದು ಹೇಳಲಾಗಿದೆ. ತೀವ್ರ ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಬಳಿಕ, ಸಾಕ್ಷ್ಯ ನಾಶಪಡಿಸಲು ಇಬ್ಬರ ಶವಗಳನ್ನೂ ಬಾವಿಗೆ ಎಸೆಯಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ, ಭೋಕರ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅರ್ಚನಾ ಪಾಟೀಲ್, ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ದಶರಥ್ ಪಾಟೀಲ್ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಅಂಕುಶ್ ಮಾನೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾತ್ರಿ ವೇಳೆ ಮೃತ ಸಂಜೀವಿನಿ ಅವರ ದೇಹವನ್ನು ಬಾವಿಯಿಂದ ಹೊರತೆಗೆಯಲಾಗಿದೆ. ಆದರೆ, ಪ್ರಿಯಕರ ಲಖನ್ ಭಂಡಾರೆ ಅವರ ದೇಹ ತಡರಾತ್ರಿಯಾದರೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಯುವತಿಯ ತಂದೆ, ಪತಿ ಮತ್ತು ಇತರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.



















