ಬೆಂಗಳೂರು: ಕಳೆದ 8 ವರ್ಷಗಳಿಂದ ಗ್ರಹಣ ಹಿಡಿದಿದ್ದ ಈಜಿಪುರ ಫ್ಲೈ ಓವರ್ ಗೆ ಈ ವರ್ಷಾಂತ್ಯದಲ್ಲಿ ಮುಕ್ತಿ ಸಿಗಲಿದ್ದು, ವಾಹನ ಸವಾರರು ಖುಷಿ ಪಡುವಂತಾಗಿದೆ.
ಈ ವರ್ಷದ ಕೊನೆಯಲ್ಲಿ ಸಂಚಾರಕ್ಕೆ ಅವಕಾಶ ಸಿಗುವ ಸಾಧ್ಯತೆ ಇದೆ. ಈಗಾಗಲೇ ಶೇ. 50ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಸರ್ಕಾರವು ಕೂಡಲೇ 40 ಕೋಟಿ ರೂ. ಹಣ ಬಿಡುಗಡೆ ಮಾಡಿದರೆ ಡಿಸೆಂಬರ್ ನಲ್ಲಿ ಸಂಚಾರಕ್ಕೆ ಅವಕಾಶ ಸಿಗಲಿದೆ.
ಈಜಿಪುರ ಜಂಕ್ಷನ್ ನಿಂದ ಕೇಂದ್ರೀಯ ಸದನದವರೆಗಿನ 2.5 ಕಿ.ಮೀ ಉದ್ದದ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಈ ರಸ್ತೆ ಸಂಚಾರಕ್ಕೆ ತೆರೆದುಕೊಂಡರೆ ಪ್ರಮುಖ ಜಂಕ್ಷನ್ ಗಳಲ್ಲಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗಲಿದೆ. ಈ ಮೇಲ್ಸೇತುವೆ ಕಾಮಗಾರಿ ಕಳೆದ 8 ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿತ್ತು. ಸದ್ಯ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಪ್ರತ್ಯೇಕ ಇಂಜಿನಿಯರ್ ತಂಡವನ್ನು ಬಿಬಿಎಂಪಿ ಆಯುಕ್ತರು ರಚಿಸಿದ್ದಾರೆ. ಹೀಗಾಗಿ ಮೇಲ್ಸೇತುವೆ ಕಾಮಗಾರಿಗೆ ವೇಗ ಸಿಕ್ಕಿದೆ. ಈಗಾಗಲೇ 70 ಪಿಪರ್ ಗಳ ನಿರ್ಮಾಣ ಕಾರ್ಯ ಮುಗಿದಿದೆ. ಸುಮಾರು 203 ಕೋಟಿ ರೂ. ವೆಚ್ಚದಲ್ಲಿ ಫ್ಲೈ ಓವರ್ ನಿರ್ಮಾಣ ಆಗುತ್ತಿದೆ.