ಬೆಂಗಳೂರು: ದೇಶದ ಅಂಚೆ ಕಚೇರಿಗಳು ಈಗ ಕೇವಲ ಪತ್ರಗಳನ್ನು ರವಾನಿಸುವ ಸಂಸ್ಥೆಗಳಾಗಿ ಉಳಿದಿಲ್ಲ. ಅಂಚೆ ಕಚೇರಿಗಳು ಈಗ ಬ್ಯಾಂಕುಗಳಾಗಿ, ಸಣ್ಣ ಹೂಡಿಕೆಯ ಕೇಂದ್ರಗಳಾಗಿ ಬದಲಾಗಿವೆ. ಇಂತಹ ಅಂಚೆ ಕಚೇರಿಗಳಲ್ಲಿ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (POMIS) ಎಂಬ ಸ್ಕೀಮ್ ಇದೆ. ಇದನ್ನು ರಾಷ್ಟ್ರೀಯ ಉಳಿತಾಯ ಮಾಸಿಕ ಆದಾಯ ಯೋಜನೆ ಖಾತೆ ಎಂದೂ ಕರೆಯಲಾಗುತ್ತದೆ. ಈ ಯೋಜನೆ ಅನ್ವಯ ಹೂಡಿಕೆ ಮಾಡಿದರೆ, ಮಾಸಿಕ ಬಡ್ಡಿ ಆದಾಯ ಗಳಿಸಬಹುದಾಗಿದೆ.
ಹೌದು, ಕೇಂದ್ರ ಸರ್ಕಾರದ ಬೆಂಬಲವಿರುವ ಉಳಿತಾಯ ಯೋಜನೆ ಇದಾಗಿದೆ. ನೀವು ಅಂಚೆ ಕಚೇರಿಯಲ್ಲಿ POMIS ಯೋಜನೆ ಅಡಿಯಲ್ಲಿ 9 ಲಕ್ಷ ರೂ. ಹೂಡಿಕೆ ಮಾಡಿದರೆ, ನಿಮಗೆ ಮಾಸಿಕ 9,250 ರೂ. ಬಡ್ಡಿ ಆದಾಯ ಸಿಗಲಿದೆ. ಇದು ಬ್ಯಾಂಕಿನ ಫಿಕ್ಸೆಡ್ ಡೆಪಾಸಿಟ್ ಮಾದರಿಯ ಹೂಡಿಕೆಯಾಗಿದೆ. ಆದರೆ, ಇಲ್ಲಿ ಪ್ರತಿ ತಿಂಗಳೂ ಬಡ್ಡಿ ಆದಾಯವನ್ನು ನೀಡಲಾಗುತ್ತದೆ.
ಸದ್ಯ ಯೋಜನೆ ಅಡಿಯಲ್ಲಿ ಶೇ.7.4ರಷ್ಟು ಬಡ್ಡಿದರ ಸಿಗುತ್ತದೆ. ನೀವು 9 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ಶೇ.7.4ರ ರಿಟರ್ನ್ಸ್ ಲೆಕ್ಕಾಚಾರದಲ್ಲಿ ತಿಂಗಳಿಗೆ 9,250 ರೂ. ಗಳಿಕೆ ಮಾಡಬಹುದಾಗಿದೆ. ಒಬ್ಬ ವ್ಯಕ್ತಿಯು ಖಾತೆ ತೆರೆದರೆ, ಗರಿಷ್ಠ 9 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದಾಗಿದೆ. ಜಂಟಿ ಖಾತೆ ತೆರೆದರೆ 15 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದಾಗಿದೆ. 15 ಲಕ್ಷ ರೂ. ಹೂಡಿಕೆ ಮಾಡಿದರೆ ಹೆಚ್ಚಿನ ಆದಾಯ ಲಭಿಸಲಿದೆ.
ಒಬ್ಬ ವ್ಯಕ್ತಿಯು ಕನಿಷ್ಠ 1,000 ರೂ. ಮೂಲಕ ಖಾತೆ ತೆರೆಯಬಹುದು. ಯೋಜನೆಯಲ್ಲಿ ಬಡ್ಡಿಯನ್ನು ಮಾಸಿಕವಾಗಿ ಜಮಾ ಮಾಡಲಾಗುತ್ತದೆ. ಇನ್ನು ಪಾವತಿಗಳನ್ನು ಇಸಿಎಸ್ ಮೂಲಕ ಸ್ವೀಕರಿಸಬಹುದು ಅಥವಾ ಲಿಂಕ್ ಮಾಡಲಾದ ಉಳಿತಾಯ ಖಾತೆಗೆ ಸ್ವಯಂ ಕ್ರೆಡಿಟ್ ಮಾಡಬಹುದು. ಬಡ್ಡಿ ಆದಾಯ ತೆರಿಗೆಗೆ ಒಳಪಡಲಿದೆ ಎಂಬುದು ಹೂಡಿಕೆಯ ಮೊದಲು ಗೊತ್ತಿರಬೇಕಾದ ಸಂಗತಿಯಾಗಿದೆ.