ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯರ ಮಹಾಎಡವಟ್ಟು ಬಯಲಾಗಿದೆ. ಸತ್ತ ವ್ಯಕ್ತಿಗೆ ವಿಭಿನ್ನ ಡೆತ್ ಸರ್ಟಿಫಿಕೇಟ್ ಗಳನ್ನು ವೈದ್ಯರು ನೀಡಿ ಎಡವಟ್ಟು ಮಾಡಿದ್ದಾರೆ.
ಇಬ್ಬರು ವೈದ್ಯರು ತಲಾ ಒಂದೊಂದು ಡೆತ್ ಸರ್ಟಿಫಿಕೇಟ್ ನೀಡಿದ್ದಾರೆ. ಹೀಗಾಗಿ ಮೃತನ ಸಾವಿಗೆ ನಿಖರ ಕಾರಣ ತಿಳಿಯದೆ ಮೃತನ ಸಂಬಂಧಿಗಳು ಪರದಾಟ ನಡೆಸುತ್ತಿದ್ದಾರೆ. 50 ವರ್ಷದ ಶ್ರೀಧರ್ ಕುಮಾರ್ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.
ಬಾಗೇಪಲ್ಲಿ ತಾಲ್ಲೂಕಿನ ಸೋಲಮಾಕಲಹಳ್ಳಿ ಗೋಶಾಲೆಯಲ್ಲಿ ಕೆಲಸ ಮಾಡುತಿದ್ದ ಶ್ರೀಧರ್ ಆಸ್ಪತ್ರೆಗೆ ದಾಖಲಾಗಿದ್ದರು. ಅಪರಿಚಿತ ವ್ಯಕ್ತಿ ಎಂದು ವೈದ್ಯರು ದಾಖಲು ಮಾಡಿಕೊಂಡಿದ್ದರು. ಶ್ರೀಧರ್ ಸತ್ತ ಮೇಲೆ ಮರಣೋತ್ತರ ಪರೀಕ್ಷೆ ಮಾಡದೆ ವೈದ್ಯರು ಡೆತ್ ಸರ್ಟಿಫಿಕೆಟ್ ನೀಡಿದ್ದಾರೆ. ಹೀಗಾಗಿ ಬಾಗೇಪಲ್ಲಿ ಸರ್ಕಾರಿ ವೈದ್ಯರ ವಿರುದ್ಧ ದೂರು ದಾಖಲಾಗಿದೆ.
ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗೆ ಶ್ರೀಧರ್ ಸಂಬಂಧಿಗಳು ದೂರು ಸಲ್ಲಿಸಿದ್ದಾರೆ. ಶ್ರೀಧರ್ ಕುಮಾರ್ ಸಾವಿಗೆ ನಿಖರ ಕಾರಣ ತಿಳಿಸುವಂತೆ ದೂರು ಸಲ್ಲಿಸಿದ್ದಾರೆ. ಈ ಕುರಿತು ವೇಮನ ಫೌಂಡೇಶನ್ ಸಂಸ್ಥಾಪಕ ಶ್ರೀನಿವಾಸರೆಡ್ಡೆ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.