ಬೆಂಗಳೂರು: ಕೇಂದ್ರ ಸರ್ಕಾರ 2023ರ ಅಕ್ಟೋಬರ್ ನಲ್ಲಿಯೇ 2 ಸಾವಿರ ರೂಪಾಯಿ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದೆ. ಬ್ಯಾಂಕ್ ಗಳಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಸ್ವೀಕರಿಸುವುದನ್ನೂ ನಿಲ್ಲಿಸಿದೆ. ಇಷ್ಟಾದರೂ ನಿಮ್ಮ ಬಳಿ 2 ಸಾವಿರ ರೂಪಾಯಿ ನೋಟುಗಳು ಉಳಿದಿವೆಯೇ? ಹಾಗಾದರೆ, ಚಿಂತೆ ಬೇಡ. ನೀವು ಈಗಲೂ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು.
ಕೆಲ ತಿಂಗಳ ಹಿಂದೆ ಆರ್ ಬಿ ಐ ನೀಡಿದ ಮಾಹಿತಿ ಪ್ರಕಾರ, ದೇಶದಲ್ಲಿ ಚಲಾವಣೆಯಲ್ಲಿದ್ದ 98.31% ನೋಟುಗಳು ಈಗಾಗಲೇ ಬ್ಯಾಂಕ್ ಗಳಿಗೆ ವಾಪಸ್ ಬಂದಿವೆ. ಆದರೆ, ಇನ್ನೂ ಸುಮಾರು 6,017 ಕೋಟಿ ರೂಪಾಯಿ ಮೌಲ್ಯದ 2000 ರೂ. ನೋಟುಗಳು ಜನರ ಬಳಿಯೇ ಉಳಿದುಕೊಂಡಿವೆ. ಮನೆಯಲ್ಲಿ ಗೊತ್ತೋ, ಗೊತ್ತಿಲ್ಲದೇ ಉಳಿದಿರುವ ನೋಟುಗಳನ್ನು ಕೂಡ ಆರ್ ಬಿ ಐ ಸಂಗ್ರಹಿಸಲು ಮುಂದಾಗಿದೆ. ಇದಕ್ಕಾಗಿ ನಿಮ್ಮ ಬಳಿ ಎರಡು ಆಯ್ಕೆಗಳು ಇವೆ.
ಮೊದಲನೆಯದಾಗಿ, ನೀವು ನೇರವಾಗಿ ಆರ್ ಬಿ ಐ ನ 19 ಪ್ರಾದೇಶಿಕ ಕಚೇರಿಗಳಿಗೆ ಹೋಗಿ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು. ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ, ಹೈದರಾಬಾದ್, ಕೋಲ್ಕತ್ತ ಸೇರಿ ದೇಶದ 19 ಪ್ರಮುಖ ನಗರಗಳಲ್ಲಿರುವ ಆರ್ ಬಿ ಐ ಕಚೇರಿಗಳಲ್ಲಿ ಈ ಸೌಲಭ್ಯವಿದೆ. ಅಲ್ಲಿಗೆ ನಿಮ್ಮ ಗುರುತಿನ ಚೀಟಿ ಮತ್ತು ಬ್ಯಾಂಕ್ ಖಾತೆ ವಿವರಗಳೊಂದಿಗೆ ಹೋದರೆ, ಹಣವನ್ನು ನೇರವಾಗಿ ನಿಮ್ಮ ಖಾತೆಗೆ ಜಮಾ ಮಾಡುತ್ತಾರೆ. ಆ ಮೂಲಕ ಚಲಾವಣೆಯಿಲ್ಲದ ನೋಟುಗಳ ಮೊತ್ತವು ನಿಮ್ಮ ಖಾತೆಗೆ ಜಮೆಯಾಗುತ್ತದೆ.
ಇದರ ಜತೆಗೆ, ನಿಮ್ಮ ಹತ್ತಿರದ ಅಂಚೆ ಕಚೇರಿ ಮೂಲಕವೂ ಈ ನೋಟುಗಳನ್ನು ಇನ್ಶುರ್ಡ್ ಪೋಸ್ಟ್ ಮೂಲಕವೂ (Insured Post) ಆರ್ ಬಿ ಐ ಗೆ ಕಳುಹಿಸಬಹುದು. ಸರಿಯಾದ ಫಾರ್ಮ್ ತುಂಬಿ, ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ನೀಡಿದರೆ, ಆರ್ಬಿಐ ನಿಮ್ಮ ಖಾತೆಗೆ ಹಣವನ್ನು ಜಮಾ ಮಾಡುತ್ತದೆ. ಇದು ಕೂಡ ಸುಲಭದ ದಾರಿಯಾಗಿದೆ.