ತಮಿಳುನಾಡು: ಅಭಿಮಾನದ ಸಾಗರದಲ್ಲಿ ಯಮರಾಜ ಹಠಾತ್ ಪ್ರತ್ಯಕ್ಷವಾಗಿಬಿಟ್ಟಿದ್ದಾನೆ. ತಮಿಳಿನ ಖ್ಯಾತ ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ದಳಪತಿ ಜನಪ್ರಿಯತೆಯೇ ಅಭಿಮಾನಿಗಳ ಸಾವಿಗೆ ದಾರಿ ತೋರಿಸಿಬಿಟ್ಟಿದೆ. ತಮಿಳುನಾಡಿನ ಕಾಲ್ತುಳಿತ ಪ್ರಕರಣಕ್ಕೆ ಯಾರು ಕಾರಣ? ವಿಜಯ್ ಎಸ್ಕೇಪ್ ಆಗೋಕೆ ಪ್ರಯತ್ನಿಸಿದ್ದು ನಿಜಾನಾ? ಒಂದು ಸರಿಯಾದ ಪ್ಲ್ಯಾನ್ ಇಲ್ಲದೆಯೇ ಈ ಬೃಹತ್ ರ‍್ಯಾಲಿ ಮಾರಣಹೋಮವಾಯ್ತ? ದುರಂತದ ಒಂದು ಅಸಲಿ ಸತ್ಯ ಮನಕಲುಕುವಂತಿದೆ.
ತಮಿಳಿನ ಖ್ಯಾತ ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ದಳಪತಿ ಅಭಿಮಾನಿಗಳ ಪಾಲಿನ ಐಕಾನ್. ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎಂಬ ಸುದ್ದಿ ಹೊರ ಬಿದ್ದಾಗಲೇ ಫ್ಯಾನ್ಸ್ ಸಖತ್ ಥ್ರಿಲ್ ಆಗಿಬಿಟ್ಟಿದ್ದರು. ವಿಜಯ್ ಪಾಲಿಟಿಕ್ಸ್ ನಲ್ಲಿ ಮುಂದುವರೆದು ತಮಿಳುನಾಡಿನ ಸಿಎಂ ಆಗ್ತಾರೆ ಎನ್ನುವವರೆಗೂ ಬೆಂಬಲ ಸಿಕ್ಕಿತ್ತು. ವಿಜಯ್ ರಾಜಕೀಯ ಪ್ರವೇಶ ಹಲವು ಘಟನುಘಟಿ ರಾಜಕೀಯ ಮುಖಂಡರ ನಿದ್ರೆ ಕೆಡಿಸಿದ್ದಂತೂ ಸುಳ್ಳಲ್ಲ. ಆದರೆ ಅಭಿಮಾನದ ಹೆಸರಿನಲ್ಲಿ ಇಂದು ನಡೆದಿದ್ದೇನು..? ಉತ್ತರ ನಿಜಕ್ಕೂ ಭಯಾನಕ, ಘನಘೋರ..!
2026ರ ತಮಿಳುನಾಡು ಅಸೆಂಬ್ಲಿ ಚುನಾವಣೆಗೆ ವಿಜಯ್ ಈಗಿನಿಂದಲೇ ರ‍್ಯಾಲಿಗಳನ್ನ ಹಮ್ಮಿಕೊಂಡು ಜನರನ್ನ ಭೇಟಿಯಾಗ್ತಿದ್ರು. ವಿಜಯ್ ಈ ಹಿಂದೆ ಭಾಗಿಯಾಗಿದ್ದ ಎರಡೂ ರ‍್ಯಾಲಿಗಳು ಯಶಸ್ವಿಯಾಗಿ ಜನರನ್ನ ರೀಚ್ ಆಗಿತ್ತು. ಆದರೆ, ಮೂರನೇ ರ‍್ಯಾಲಿ ಸಾವಿನ ಜಾತ್ರೆಯಾಗಿಬಿಟ್ಟಿದೆ. ಜನಸಾಗರವನ್ನ ಕಂಟ್ರೋಲ್ ಮಾಡಲಾಗದೇ ಆಗಬಾರದ್ದು ಆಗಿಹೋಗಿದೆ. 10 ಸಾವಿರ ಜನ ಸೇರುವ ಜಾಗದಲ್ಲಿ 1 ಲಕ್ಷ ಜನ ಸೇರಿ ಸಾವಿಗೆ ಕರೆ ಕೊಟ್ಟಂತಾಗಿದೆ. ಭದ್ರತಾ ವೈಫಲ್ಯ ಮತ್ತು ವಿಜಯ್ ಜನಪ್ರಿಯತೆಯೇ 40 ಜನರ ಸಾವಿಗೆ ಕಾರಣವಾಗಿದ್ದು, 80ಕ್ಕೂ ಹೆಚ್ಚು ಜನಕ್ಕೆ ಗಂಭೀರ ಗಾಯಗಳಾಗಿವೆ. ವಿಜಯ್ ಈ ಜನ ಸಂಪರ್ಕ ರ‍್ಯಾಲಿಗೆ ಬರೋಕೆ ಅಭಿಮಾನಿಗಳು ಮತ್ತು ಬೆಂಬಲಿಗರನ್ನ 6 ಗಂಟೆಗಳ ಕಾಲ ಕಾಯಿಸಿದ್ದಾರೆ. ವಿಜಯ್ ಬಂದ ತಕ್ಷಣ ಅಲ್ಲಿದ್ದ ಪೊಲೀಸರಿಗೂ ನಿಯಂತ್ರಣ ತಪ್ಪಿ ಹೋಗಿದೆ.
ಘಟನೆ ನಡೆದ ಬಳಿಕ ವಿಜಯ್ ಏರ್ ಪೋರ್ಟ್ ಗೆ ತೆರಳಿದ್ದು ಅನೇಕರ ಕೆಂಗಣ್ಣಿಗೆ ವಿಜಯ್ ಗುರಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಜಯ್ ಸಂತಾಪ ಸೂಚಿಸಿದ್ರೂ, ವಿಜಯ್ ಈ ಸಾವುಗಳ ನೇರ ಹೊಣೆ ಹೊರಬೇಕು ಎಂಬ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ದುರಂತದ ತನಿಖೆಗಾಗಿ ತನಿಖಾ ಆಯೋಗವು ರಚನೆಯಾಗಿದೆ. ವಿಜಯ್ ಮತ್ತು ರ್ಯಾಲಿಯ ಉಸ್ತುವಾರಿಯ ಮೇಲೆ ಎಫ್.ಐ.ಆರ್ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ. ಹೋದ ಜೀವಗಳು ಮತ್ತೆ ಬಾರದು. ವಿಜಯ್ ಅಭಿಮಾನದ ಸಾಗರ ಸಾವಿನ ಮೆಟ್ಟಿಲೇರಿದ್ದು ಈ ವರ್ಷದ ಅತ್ಯಂತ ದೊಡ್ಡ ದುರಂತ.


















