ನವದೆಹಲಿ: ದೇಶದಲ್ಲಿ ಉದ್ಯೋಗ ಸೃಷ್ಟಿಯಾಗಬೇಕು, ಯುವಕ-ಯುವತಿಯರಿಗೆ ನೆರವಾಗಬೇಕು ಎಂದು ಕೇಂದ್ರ ಸರ್ಕಾರವು ಉದ್ಯೋಗ ಆಧಾರಿತ ಪ್ರೋತ್ಸಾಹಕ ಯೋಜನೆ (ಎಂಪ್ಲಾಯ್ ಮೆಂಟ್ ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್) ಜಾರಿಗೆ ತಂದಿದೆ. ಯೋಜನೆ ಅನ್ವಯ ಪ್ರಯೋಜನ ಪಡೆಯಲು ಇಪಿಎಫ್ ಸದಸ್ಯರು ತಮ್ಮ ಯುಎಎನ್ ನಂಬರ್ ಅನ್ನು ಆ್ಯಕ್ಟಿವೇಟ್ ಮಾಡಬೇಕು ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು. ಇಎಲ್ಐ ಸ್ಕೀಮ್ ಲಾಭ ಪಡೆಯಲು ಇವೆರಡು ಕಾರ್ಯಗಳಿಗೆ ನೀಡಿರುವ ಗಡುವನ್ನು ಜೂನ್ 30ಕ್ಕೆ ವಿಸ್ತರಿಸಲಾಗಿದೆ. ಹಾಗಾಗಿ, ಅಭ್ಯರ್ಥಿಗಳು ಕೂಡಲೇ ಎರಡೂ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬಹುದಾಗಿದೆ.
ಯುಎಎನ್ ಆ್ಯಕ್ಟಿವೇಟ್ ಮಾಡುವುದು ಹೇಗೆ?
- ಇಪಿಎಫ್ಒ ಮೆಂಬರ್ ಪೋರ್ಟಲ್ ಗೆ ಭೇಟಿ ನೀಡಿ
- ಆ್ಯಕ್ಟಿವೇಟ್ ಯುಎಎನ್ ಮೇಲೆ ಕ್ಲಿಕ್ ಮಾಡಿ
- ಯುಎಎನ್, ಆಧಾರ್ ಸಂಖ್ಯೆ, ಹೆಸರು, ಜನ್ಮದಿನಾಂಕ, ಮೊಬೈಲ್ ನಂಬರ್ ನಮೂದಿಸಿ
- ಮೊಬೈಲ್ ನಂಬರ್ ಗೆ ಬರುವ ಒಟಿಪಿಯನ್ನು ನಮೂದಿಸಿ
- ನಂತರ ಯುಎಎನ್ ಆ್ಯಕ್ಟಿವೇಟ್ ಆಗುತ್ತದೆ.
ಏನಿದು ಯೋಜನೆ?
ಕೇಂದ್ರ ಸರ್ಕಾರವು ಎಂಪ್ಲಾಯ್ ಮೆಂಟ್ ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್ ಅನ್ನು 2024ರ ಬಜೆಟ್ ನಲ್ಲಿ ಘೋಷಿಸಿದೆ. ಯೋಜನೆ ಅನ್ವಯ ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುತ್ತಿರುವವರಿಗೆ ಸರ್ಕಾರವು ಒಂದು ತಿಂಗಳ ಸಂಬಳವನ್ನು ಸಬ್ಸಿಡಿ ಅಥವಾ ಪ್ರೋತ್ಸಾಹ ಧನವನ್ನಾಗಿ ನೀಡುತ್ತದೆ. ಆದರೆ, ಈ ಹಣ ಗರಿಷ್ಠ 15 ಸಾವಿರ ರೂ.ಗೆ ಮಿತಿಗೊಂಡಿರುತ್ತದೆ. ಮೊದಲ ಬಾರಿಗೆ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಕಂಪನಿಗಳಿಗೂ ಸರ್ಕಾರ ಪ್ರೋತ್ಸಾಹಕ ಒದಗಿಸುತ್ತದೆ. ಉದ್ಯೋಗಿಗೆ ನೀಡಲಾಗುವ ಇಪಿಎಫ್ ಕೊಡುಗೆಯಲ್ಲಿ ಸರ್ಕಾರವೂ ಒಂದು ಭಾರತ ಹೊರುತ್ತದೆ. ಹಾಗೆಯೇ, ಕಂಪನಿಗಳು ಹೆಚ್ಚುವರಿ ಉದ್ಯೋಗಿಗಳನ್ನು ಸೇರಿಸಿಕೊಂಡಾಗಲೂ ಸರ್ಕಾರವು ಇಪಿಎಫ್ ಕೊಡುಗೆಯ ಭಾರವನ್ನು ಹಂಚಿಕೊಳ್ಳುತ್ತದೆ.