ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಬ್ರಹ್ಮಾವರ ಠಾಣೆ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹೈಕೋರ್ಟ್ ಕದ ತಟ್ಟಿದ್ದಾರೆ.
ಈ ಸಂಬಂಧಿಸಿದಂತೆ ಕ್ರಿಮಿನಲ್ ಅರ್ಜಿ ಸಲ್ಲಿಸಿರುವ ತಿಮರೋಡಿ, ಬ್ರಹ್ಮಾವರ ಪೊಲೀಸರು ಮತ್ತು ಪ್ರಕರಣದ ದೂರುದಾರ ರಾಜೀವ್ ಕುಲಾಲ್ ಅವರನ್ನು ಪ್ರತಿವಾದಿಯನ್ನಾಗಿ ಮಾಡಿದ್ದಾರೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ನಿದಿಯಾಗಬೇಕಿದೆ. ರಾಜೀವ್ ಕುಲಾಲ್ ಮತ್ತು ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಆತನ ವಿರುದ್ಧ ನಾನು ಯಾವುದೇ ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಮೂರನೇ ವ್ಯಕ್ತಿಯಾದ ಬಿ.ಎಲ್. ಸಂತೋಷ್ ಪರವಾಗಿ ಕುಲಾಲ್ ದೂರು ದಾಖಲಿಸಿದ್ದಾರೆ. ಆತ ದಾಖಲಿಸಿದ ದೂರು ಆಧರಿಸಿ 2025ರ ಆ.21ರಂದು ತಮ್ಮನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅರ್ಜಿಯಲ್ಲಿ ತಿಮರೋಡಿ ಆಕ್ಷೇಪಿಸಿದ್ದಾರೆ.
ದೂರು ದಾಖಲಾದ ಕೂಡಲೇ ಪೊಲೀಸರು ತರಾತುರಿಯಲ್ಲಿ ತನ್ನ ಪತ್ನಿಗೆ ಮೊದಲ ನೋಟಿಸ್ ನೀಡಿದ್ದಾರೆ. ಅನಂತರ ಎರಡನೇ ನೋಟಿಸ್ ನೀಡಿದ್ದಾರೆ. ಈ ಎರಡೂ ನೋಟಿಸ್ ನೀಡುವಾಗ ನಿಗದಿತ ನಿಯಮಗಳನ್ನು ಪಾಲಿಸಿಲ್ಲ. ತನ್ನನ್ನು ಬಂಧಿಸಲು ಸೂಕ್ತ ಕಾರಣ ನೀಡಿಲ್ಲ. ಬಂಧನ ಮಾಹಿತಿ ಬಗ್ಗೆ ತಮ್ಮ ಕುಟುಂಬದವರಿಗೆ ಅರೆಸ್ಟ್ ಮೆಮೊ ಕೂಡ ನೀಡಿಲ್ಲ. ಇದರಿಂದ ಬಂಧನ ಪ್ರಕ್ರಿಯೆ ದೋಷಪೂರಿತವಾಗಿದ್ದು, ಎಫ್‌ಐಆರ್ ರದ್ದುಪಡಿಸಬೇಕು ಎಂದು ತಿಮರೋಡಿ ಅರ್ಜಿಯಲ್ಲಿ ಕೋರಿದ್ದಾರೆ.