ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ಸಾಕ್ಷಿ ದೂರುದಾರ ಸೂಚಿಸಿರುವ ಸ್ಥಳಗಳಲ್ಲಿ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ ಸೋಮವಾರ ತನ್ನ ಮಧ್ಯಂತರ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಮಾಹಿತಿ ಲಭ್ಯವಾಗಿದೆ. ಅದೇ ದಿನ ಗೃಹ ಸಚಿವ ಡಾ. ಪರಮೇಶ್ವರ್ ವಿಧಾನಸಭೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿ ಉತ್ತರ ನೀಡಲಿದ್ದಾರೆ.
ಸೋಮವಾರ (ಆ.18) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಸ್‌ಐಟಿಯು ಮಧ್ಯಂತರ ವರದಿಯನ್ನು ಸಲ್ಲಿಸಲಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಡಾ| ಪರಮೇಶ್ವರ್ ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಇದುವರೆಗೆ ತನಿಖೆಯಲ್ಲಿ ಪತ್ತೆಯಾದ ಅಂಶಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಸಂಯೋಜನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ತನಿಖೆಯ ಪ್ರಕ್ರಿಯೆಗಳನ್ನು ಮುಂದುವರಿಸಿದ್ದಾರೆ ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ಬಿಜೆಪಿ ಉಭಯ ಸದನಗಳಲ್ಲಿ ಧರ್ಮಸ್ಥಳದ ಪರ ಗಟ್ಟಿ ಧ್ವನಿ ಎತ್ತಿದೆ. ಅಪಪ್ರಚಾರಕ್ಕೆ ಅಂತ್ಯ ಹಾಡುವ ಜೊತೆಗೆ ಷಡ್ಯಂತ್ರಕ್ಕೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆಯೂ ಪಟ್ಟು ಹಿಡಿದಿದೆ. ಇನ್ನೊಂದೆಡೆ ಕಾಂಗ್ರೆಸ್ ಆಂತರಿಕ ವಲಯದಲ್ಲೇ ಈ ತನಿಖೆ ಸಾಗುತ್ತಿರುವ ರೀತಿಯ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಲವಾರು ಶಾಸಕರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಸಚಿವ ಸಂಪುಟದ ಸದಸ್ಯರು ಕೂಡ ಧರ್ಮಸ್ಥಳದ ಪರ ನಾವಿದ್ದೇವೆ ಎಂಬ ಹೇಳಿಕೆ ನೀಡಿದ್ದಾರೆ. ಹೀಗಾಗಿ ಸರಕಾರ ಇಕ್ಕಟ್ಟಿಗೆ ಸಿಲುಕಿದೆ. ವರದಿ ಸ್ವೀಕಾರದ ಬಳಿಕ ಸಿಎಂ-ಡಿಸಿಎಂ ಪ್ರತ್ಯೇಕ ಸಭೆ ನಡೆಸುವ ಸಾಧ್ಯತೆ ಇದ್ದು, ಆ ಬಳಿಕವೇ ಡಾ.ಪರಮೇಶ್ವರ್ ಸದನದಲ್ಲಿ ಸುದೀರ್ಘ ಉತ್ತರ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಿನದಿನವೂ ಕುತೂಹಲವನ್ನು ಕೆರಳಿಸುತ್ತಿರುವ ಪ್ರಕರಣದ ತಾರ್ಕಿಕ ಅಂತ್ಯ ಕಾಣುವುದಕ್ಕೆ ಮುಹೂರ್ತ ಎಂದು ನಿಗದಿಯಾಗುತ್ತದೆ ಎಂದು ಕಾದು ನೋಡಬೇಕಿದೆ.