ಉಡುಪಿ :“ಧರ್ಮಸ್ಥಳ ಕ್ಷೇತ್ರದ ಮೇಲೆ ನಡೆಯುತ್ತಿರುವ ವೈಚಾರಿಕ ಆಕ್ರಮಣ ನಾವು ಎದುರಿಸುತ್ತಿರುವ ಸವಾಲಾಗಿದ್ದು,ಈ ಹಿಂದೆ ಉಡುಪಿ ಮಠದ ಮೇಲೂ ಹೀಗೆಯೆ ಆಕ್ರಮಣ ಮಾಡಲಾಗಿತ್ತು. ಮುಂದಿನ ದಿನಗಳಲ್ಲಿ ಇನ್ನೂ ಹಲವು ದೇವಾಲಯಗಳ ಮೇಲೂ ಆರೋಪಗಳು ಬರುವಂತಹ ಸಾಧ್ಯತೆ ಇದೆ. ಯಾಕಂದರೇ, ಈಗ ಹುಲಿಗೆ ರಕ್ತದ ರುಚಿ ಸಿಕ್ಕಿದೆ” ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೇಳಿದ್ದಾರೆ.
ಉಡುಪಿ ಜಿಲ್ಲೆಯ ನೂತನ ಬಿಜೆಪಿ ಕಾರ್ಯಾಲಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬಿ.ಎಲ್.ಸಂತೋಷ್ “ವೈಚಾರಿಕವಾಗಿರುವ ವಾಮಪಂಥೀಯರು, ರಾಜಕೀಯ ಶಕ್ತಿಗಳು ಶಬರಿಮಲೆಯಲ್ಲಿ ಸ್ವಲ್ಪ ರಕ್ತದ ರುಚಿ ನೋಡಿದ್ರು,ಈಶ ಆಶ್ರಮದಲ್ಲಿ ,ಶನಿ ಶಿಂಗ್ನಾಪುರದಲ್ಲಿ ಸ್ವಲ್ಪ ರಕ್ತದ ರುಚಿ ನೋಡಿದ್ದರು. ಈಗ ಧರ್ಮಸ್ಥಳದಲ್ಲೂ ಅದೇ ಪ್ರಯತ್ನ ನಡೆಯುತ್ತಾ ಇದೆ. ನಡೆದಂತಹ ಪ್ರತಿ ಆಕ್ರಮಣಕ್ಕೆ ,ಅಪಪ್ರಚಾರಕ್ಕೆ ತಕ್ಕನಾದ ಶಿಕ್ಷೆ ಆಗಲೇಬೇಕು” ಎಂದು ಈ ಸಂದರ್ಭದಲ್ಲಿ ಅವರು ಆಗ್ರಹಿಸಿದ್ದಾರೆ.
ಮುಂದುವರಿದು “ಕುಂಭಮೇಳದ ವಿಚಾರವಾಗಿ ಎಷ್ಟು ಅಪಪ್ರಚಾರ ಹೇಗಿತ್ತು ಎಂದರೇ, ಜಗತ್ತಲ್ಲೇ ಇರದಂತ ಕಾಯಿಲೆಗಳು ಬಂದು ಬಿಡುತ್ತವೆ ಎಂಬಂತೆ ಬಿಂಬಿಸಿದರು, ಆದರೆ ನಮ್ಮ ದೇಶ ನಂಬಿಕೆಗಳ ವಿಷಯದಲ್ಲಿ ಗಟ್ಟಿಯಾಗಿದೆ. ಇವರು ಹೇಳಿದ ಮೇಲೆ ಇನ್ನು, ಹೆಚ್ಚಾಗಿ ಜನ ಕುಂಭ ಮೇಳದಲ್ಲಿ ಭಾಗವಹಸಿದರು”ಎಂದು ಹೇಳಿದ್ದಾರೆ.
ಇನ್ನು, ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕರಾದ ಸುನಿಲ್ ಕುಮಾರ್, ಯಶ್ ಪಾಲ್ ಸುವರ್ಣ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.