ಬೆಂಗಳೂರು: ಧರ್ಮಸ್ಥಳದ (Dharmasthala) ನೇತ್ರಾವತಿ ದಂಡೆಯ ಬಳಿ ಉತ್ಖನನ ಕಾರ್ಯ ಮುಂದುವರೆದಿದೆ. ಈ ವೇಳೆ ಪಾಯಿಂಟ್ 6 ರಲ್ಲಿ ಸಿಕ್ಕದ ಅಸ್ಥಿಪಂಜರದ ಮೂಳೆಗಳನ್ನು (Skeletal Remains) ಬೆಂಗಳೂರಿನ (Bengaluru) ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (FSL) ಎಸ್ ಐಟಿ ತಂಡ ಕಳುಹಿಸಿದೆ.
ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳ ಪ್ರಕರಣವನ್ನು ಬೆನ್ನತ್ತಿದ ವಿಶೇಷ ತನಿಖಾ ತಂಡ 25 ಮೂಳೆಗಳನ್ನು ಎಫ್ ಎಸ್ ಎಲ್ ಗೆ ರವಾನಿಸಲಾಗಿದೆ. ನೇತ್ರಾವತಿ ತಟದ ಪಾಯಿಂಟ್ 6ರಲ್ಲಿ ಕೆಲ ಅಸ್ಥಿಪಂಜರದ ಮೂಳೆಗಳು, ತಲೆಬುರುಡೆ ಸಿಕ್ಕಿವೆ. ಅವುಗಳನ್ನು ಎಫ್ ಎಸ್ ಎಲ್ ಗೆ ಕಳುಹಿಸಲಾಗಿದೆ. ಬಳಿಕ ಡಿಎನ್‌ಎ ಪರೀಕ್ಷೆ ನಡೆಸಲಾಗುತ್ತದೆ. ಅಸ್ಥಿಪಂಜರದ ವಯಸ್ಸು ಮತ್ತು ಸ್ಥಿತಿ ಸೇರಿದಂತೆ ಹಲವಾರು ಅಂಶಗಳನ್ನು ಅವಲಂಬಿಸಿ ಎಫ್‌ಎಸ್‌ಎಲ್ ಪರೀಕ್ಷೆ ನಡೆಸಲಾಗುತ್ತದೆ. ವರದಿಯಿಂದ ಲಿಂಗ, ಅಂದಾಜು ವಯಸ್ಸು, ಎತ್ತರ ಮತ್ತು ಅನೇಕ ಸಂದರ್ಭಗಳಲ್ಲಿ ಸಾವಿಗೆ ಕಾರಣ ತಿಳಿಯುತ್ತದೆ.
ಮೂಳೆಗಳಿಂದ ದೇಹದ ಮೇಲೆ ಗಾಯವಾಗಿದ್ದರೆ ಪತ್ತೆ ಮಾಡಲು ಸಾಧ್ಯವಿದೆ. ದವಡೆ ಹಲ್ಲು, ಉದ್ದನೆಯ ಮೂಳೆಯಿಂದ ಮೃತನ ಗುರುತು ಪತ್ತೆ ಮಾಡಬಹುದು. ಅಲ್ಲದೇ, ಡಿಎನ್ ಎ ಮಾದರಿಯಿಂದ ಕುಟುಂಬಸ್ಥರ ಹೋಲಿಕೆ ಕೂಡ ಮಾಡಬಹುದು.