ಮುಂಬೈ: ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಅಭಿಮಾನಿಯೊಬ್ಬರ ಮೇಲೆ ತಾಳ್ಮೆ ಕಳೆದುಕೊಂಡು ಗರಂ ಆಗಿರುವ ಘಟನೆ ನಡೆದಿದೆ. ತಮ್ಮ ಒಂದು ವರ್ಷದ ಮಗಳು ದುವಾಳ ವಿಡಿಯೋವನ್ನು ಅನುಮತಿ ಇಲ್ಲದೆ ಚಿತ್ರೀಕರಿಸಿದ್ದೇ ಇದಕ್ಕೆ ಕಾರಣ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಾರಾ ದಂಪತಿಯ ಖಾಸಗಿತನದ ಹಕ್ಕಿನ ಬಗ್ಗೆ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ, ದೀಪಿಕಾ ಅವರು ತಮ್ಮ ಮಗಳು ದುವಾಳನ್ನು ತೊಡೆಯ ಮೇಲೆ ಕೂರಿಸಿಕೊಂಡು ಬಗ್ಗಿಯಲ್ಲಿ (ವಿಮಾನ ನಿಲ್ದಾಣದ ಚಿಕ್ಕ ವಾಹನ) ಸಾಗುತ್ತಿರುವುದು ಕಂಡುಬಂದಿದೆ. ಈ ವೇಳೆ ವ್ಯಕ್ತಿಯೊಬ್ಬರು ವಿಡಿಯೋ ಮಾಡುತ್ತಿರುವುದನ್ನು ಗಮನಿಸಿದ ದೀಪಿಕಾ, ‘ನಿಲ್ಲಿಸಿ’ ಎಂದು ಕಟುವಾಗಿಯೇ ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಈ ಘಟನೆಯು ದೀಪಿಕಾ ಮತ್ತು ರಣವೀರ್ ಸಿಂಗ್ ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. “ಇದು ಖಾಸಗಿತನದ ಸ್ಪಷ್ಟ ಉಲ್ಲಂಘನೆ,” ಎಂದು ಕೆಲವರು ಕರೆದರೆ, “ಪೋಷಕರು ಒಪ್ಪಿಗೆ ನೀಡದಿದ್ದಾಗ ಮಗುವಿನ ವಿಡಿಯೋ ಹಾಕುವುದು ತಪ್ಪು. ದಯವಿಟ್ಟು ವಿಡಿಯೋವನ್ನು ಡಿಲೀಟ್ ಮಾಡಿ,” ಎಂದು ಹಲವರು ಆಗ್ರಹಿಸಿದ್ದಾರೆ.
ದೀಪಿಕಾ ಮತ್ತು ರಣವೀರ್ ಸಿಂಗ್ ಅವರು ತಮ್ಮ ಮಗಳು ದುವಾಳನ್ನು ಮೊದಲಿನಿಂದಲೂ ಕ್ಯಾಮೆರಾ ಕಣ್ಣಿನಿಂದ ದೂರ ಇಡುತ್ತಾ ಬಂದಿದ್ದಾರೆ. ಪಾಪರಾಜಿಗಳು ಕೂಡಾ ಇದುವರೆಗೂ ಅವರ ಮನವಿಯನ್ನು ಗೌರವಿಸಿದ್ದರು. ಈ ಹಿಂದೆ ನಟಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕೂಡ ತಮ್ಮ ಮಗಳು ರಾಹಾಳ ಫೋಟೋಗಳನ್ನು ತೆಗೆಯದಂತೆ ಮಾಧ್ಯಮಗಳಿಗೆ ಮನವಿ ಮಾಡಿಕೊಂಡಿದ್ದರು.
2018ರಲ್ಲಿ ವಿವಾಹವಾದ ದೀಪಿಕಾ ಮತ್ತು ರಣವೀರ್ ಜೋಡಿಗೆ ಕಳೆದ ವರ್ಷ ಸೆಪ್ಟೆಂಬರ್ 8 ರಂದು ದುವಾ ಜನಿಸಿದ್ದಳು. “ದುವಾ ಎಂದರೆ ಪ್ರಾರ್ಥನೆ, ನಮ್ಮ ಪ್ರಾರ್ಥನೆಗೆ ಸಿಕ್ಕ ಉತ್ತರ ಅವಳು” ಎಂದು ದೀಪಾವಳಿ ಸಂದರ್ಭದಲ್ಲಿ ಮಗಳ ಹೆಸರನ್ನು ದಂಪತಿ ಅಧಿಕೃತವಾಗಿ ಪರಿಚಯಿಸಿದ್ದರು.
ಇನ್ನು ವೃತ್ತಿ ಬದುಕಿಗೆ ಬಂದರೆ, ದೀಪಿಕಾ ಅವರು ಹೆರಿಗೆಯ ವಿರಾಮದ ನಂತರ ಅಲ್ಲು ಅರ್ಜುನ್ ಜೊತೆಗಿನ ಅಟ್ಲಿ ನಿರ್ದೇಶನದ ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ರಣವೀರ್ ಸಿಂಗ್ ಅವರು ‘ಧುರಂಧರ್’ ಮತ್ತು ಬಹುನಿರೀಕ್ಷಿತ ‘ಡಾನ್ 3’ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.


















