ಬೆಂಗಳೂರು: ಕಾಂಗ್ರೆಸ್ ಗೆ ಈಗ ಅಂಬೇಡ್ಕರ್ ಬಗ್ಗೆ ನೆನಪಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (B Y Vijayendra) ಟೀಕಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತಕ್ಕೆ ಸಂವಿಧಾನದ ಕೊಡುಗೆ ನೀಡಿದ ಅಂಬೇಡ್ಕರ್ರನ್ನು ಕಾಂಗ್ರೆಸ್ನವರು ಹೇಗೆ ನಡೆಸಿಕೊಂಡರು ಎಂಬ ಸತ್ಯ, ರಾಜ್ಯ ಮತ್ತು ದೇಶದ ಜನತೆಗೆ ಗೊತ್ತಾಗಬೇಕಿದೆ. ಭಾರತದ ನಿಜವಾದ ರತ್ನವಾಗಿದ್ದ ಅಂಬೇಡ್ಕರ್ ಅವರಿಗೆ ಭಾರತರತ್ನ ಕೊಡಲು ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಬಿಜೆಪಿ ಬೆಂಬಲಿಸಿದ ವಿ.ಪಿ.ಸಿಂಗ್ ಅವರ ಸರ್ಕಾರವೇ ಬರಬೇಕಾಯಿತಲ್ಲವೇ? ಎಂದು ಪ್ರಶ್ನಿಸಿ, ಕಿಡಿಕಾರಿದ್ದಾರೆ.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಅವರು ಮಾತನಾಡಿ, ಅಂಬೇಡ್ಕರ್ ಅವರ ಜೀವಿತಾವಧಿಯಲ್ಲಿ ಇದ್ದುದಕ್ಕಿಂತ ಹೆಚ್ಚು ಈಗ ಪ್ರಸ್ತುತವಾಗಿದ್ದಾರೆ ಎಂದು ಹೇಳಿದ್ದಾರೆ.