ತುಮಕೂರು : ಕಾಂಗ್ರೆಸ್ ಪಕ್ಷ ನನಗೆ ಮೋಸ ಮಾಡಿಲ್ಲ. ಯಾವುದೇ ಕಾರಣಕ್ಕೂ ನಾನು ಪಕ್ಷ ಬಿಡುವುದಿಲ್ಲ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಸ್ಪಷ್ಟಪಡಿಸಿದ್ದಾರೆ.
ಮಧುಗಿರಿಯ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ರಾಜಣ್ಣ, ಅನ್ನಭಾಗ್ಯ ಕಾರ್ಯಕ್ರಮ ನನಗೆ ಬಹಳ ಪ್ರೀತಿಯ ಯೋಜನೆಯಾಗಿದೆ. ಸಿದ್ದರಾಮಯ್ಯ ಅವರು ಅನ್ನಭಾಗ್ಯ ಕಾರ್ಯಕ್ರಮದಿಂದ ನನಗೆ ಅಚ್ಚುಮೆಚ್ಚು. ಅದಕ್ಕೆ ನಾನು ಅವರನ್ನು ಹೆಚ್ಚು ಪ್ರೀತಿ ಮಾಡುತ್ತೇನೆ. ಹಸಿವಿನ ಪಿಡುಗು ತೊಡೆದು ಹಾಕಿದ್ದು ಸಿದ್ದರಾಮಯ್ಯ. ಉಳಿದ ಸಿಎಂಗಳಿಗೆ ಈ ಮನಸ್ಥಿತಿ ಇರಲಿಲ್ಲ. ಹಾಗಾಗಿ ಅವರು ಅನ್ನಭಾಗ್ಯದಂತಹ ಕಾರ್ಯಕ್ರಮ ತಂದಿಲ್ಲ. ಸಿದ್ದರಾಮಯ್ಯನವರು ಅವರ ಮನೆಯಿಂದ ತಂದು ಕೊಟ್ಟಿಲ್ಲ ನಿಜ. ಆದರೆ ಬೇರೆ ಸಿಎಂಗಳು ಯಾಕೆ ಕೊಟ್ಟಿಲ್ಲ. ಮಧುಗಿರಿ ತಾಲೂಕಿನಲ್ಲಿ ಅನ್ನಭಾಗ್ಯ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ. ಬಡವರ ಕಾರ್ಯಕ್ರಮ ಮಂಜೂರು ಮಾಡುವಾಗ ನಾವು ತಾರತಮ್ಯ ಮಾಡಿಲ್ಲ. ಪಕ್ಷಕ್ಕೆ ಮತ ಹಾಕಿಲ್ಲ ಎಂದು ಸವಲತ್ತು ಕೊಡದೇ ಇಲ್ಲ ನಾನು. ಎಲ್ಲಾ ಪಕ್ಷ, ಜಾತಿಯವರಿಗೆ ಮನೆಗಳು ಮಂಜೂರು ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ನಾನು ಮಾಜಿ ಸಚಿವನಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಅದರಿಂದ ಬೇಜಾರಿಲ್ಲ. 35 ಸಾವಿರ ಲೀಡ್‌ನಿಂದ ನಾನು ಗೆದ್ದಿದ್ದೇನೆ. ಈಗ ಚುನಾವಣೆ ಆದರೂ ನಾನೂ ಹೆಚ್ಚು ಮತದಿಂದ ಗೆಲ್ಲುತ್ತೇನೆ. ನಾನು ಭ್ರಷ್ಟಾಚಾರ ಮಾಡಿಲ್ಲ. ಆದರೂ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟೆ ಎಂದು ಮಾತನಾಡಿದ್ದಾರೆ.
ಯಾವ ಕಾರಣಕ್ಕೆ ನಾನು ಬಿಜೆಪಿಗೆ ಸೇರಲಿ ? ಅದರ ಅವಕಾಶ ಇಲ್ಲ ನನಗೆ. ಪಾರ್ಟಿ ನನಗೆ ಏನೂ ಮೋಸ ಮಾಡಿಲ್ಲ. ಯಾವ ಕಾರಣಕ್ಕೂ ನಾನು ಕಾಂಗ್ರೆಸ್ ಬಿಡುವುದಿಲ್ಲ. ಜನರು ನನಗೆ ಕಾಂಗ್ರೆಸ್, ಬಿಜೆಪಿ ಅಥವಾ ಇಂಡಿಪೆಂಡೆಂಟ್ ನಿಂತರೂ ಮತ ಹಾಕುತ್ತಾರೆ. ರಾಹುಲ್ ಗಾಂಧಿ ಮತಗಳ್ಳತನ ಹೋರಾಟವನ್ನು ನಾನು ಬೆಂಬಲಿಸುತ್ತೇನೆ. ಸಿದ್ದರಾಮಯ್ಯ ನೇತೃತ್ವ ಇರುವವರೆಗೂ ನನ್ನ ಭವಿಷ್ಯಕ್ಕೆ ತೊಂದರೆ ಇಲ್ಲ ಎಂದು ಹೇಳುವ ಮೂಲಕ ಬಿಜೆಪಿ ಸೇರುತ್ತಾರೆ ಎಂಬ ಆರೋಪವನ್ನು ಅಲ್ಲಗಳೆದಿದ್ದಾರೆ.
ರಾಜಕೀಯದಲ್ಲಿ ದುಡ್ಡು ಅಥವಾ ಜಾತಿ ಇದ್ದಾಗ ಮಾತ್ರ ಬೆಳೆಯಬಹುದು. ಅದು ಎರಡೂ ನನ್ನ ಬಳಿ ಇಲ್ಲ. ಆದರೂ ಕ್ಷೇತ್ರದ ಜನರು ನನ್ನ ಬೆಳೆಸಿದ್ದಾರೆ ಎಂದಿದ್ದಾರೆ.