ಬೆಂಗಳೂರು: ದೇಶದಲ್ಲಿ ಪ್ರಧಾನ ಮಂತ್ರಿ ಜನಧನ್ ಯೋಜನೆ (PMJDY) ಅನ್ವಯ ಇದುವರೆಗೆ ಸುಮಾರು 55 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಈಗ ಕೇಂದ್ರ ಸರ್ಕಾರವು ಜನಧನ್ ಬ್ಯಾಂಕ್ ಖಾತೆ ತೆರೆದವರಿಗೆ ಮರು ಕೆವೈಸಿ (Re-KYC) ಮಾಡಿಸಲು ಆದೇಶಿಸಿದೆ. ಮರು ಕೆವೈಸಿ ಪ್ರಕ್ರಿಯೆ ಮುಗಿಸಲು (Jan Dhan Account Re-KYC) ಸೆಪ್ಟೆಂಬರ್ 30ರ ಡೆಡ್ ಲೈನ್ ನೀಡಲಾಗಿದೆ. ಗಡುವಿನೊಳಗೆ ಮರು ಕೆವೈಸಿ ಮಾಡಿಸದಿದ್ದರೆ ಬ್ಯಾಂಕ್ ಖಾತೆ ನಿಷ್ಕ್ರಿಯವಾಗುತ್ತದೆ. ಇದರಿಂದ ನೀವು ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಮರು ಕೆವೈಸಿ ಒಂದು ಸರಳ ಪ್ರಕ್ರಿಯೆಯಾಗಿದ್ದು, ನೀವು ನಿಮ್ಮ ಹೆಸರು, ವಿಳಾಸ, ಹಾಗೂ ಫೋಟೊ ಸೇರಿ ವಿವಿಧ ಮಾಹಿತಿಯನ್ನು ಬ್ಯಾಂಕ್ನಲ್ಲಿ ನವೀಕರಿಸುವುದು. ಇದರಿಂದ ಮೋಸಗಳನ್ನು ತಪ್ಪಿಸಲು ಹಾಗೂ ಬ್ಯಾಂಕಿಂಗ್ ಸೇವೆಗಳನ್ನು ಸುಗಮವಾಗಿ ಪಡೆಯಲು ಸಾಧ್ಯವಾಗುತ್ತದೆ.
ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ ಗಳು 2025ರ ಜುಲೈ 1ರಿಂದ ಸೆಪ್ಟೆಂಬರ್ 30ರವರೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಿಬಿರಗಳನ್ನು ಆಯೋಜಿಸುತ್ತಿವೆ. ಈ ಶಿಬಿರಗಳಲ್ಲಿ ಬ್ಯಾಂಕ್ ಸಿಬ್ಬಂದಿ ನಿಮ್ಮ ಮನೆಗಳಿಗೆ ಬಂದು ಪುನಃ KYC ಪ್ರಕ್ರಿಯೆ ನಡೆಸುತ್ತಿದ್ದಾರೆ. ಇತ್ತೀಚೆಗೆ, ಸುಮಾರು 1 ಲಕ್ಷ ಗ್ರಾಮ ಪಂಚಾಯತ್ ಗಳಲ್ಲಿ ಶಿಬಿರಗಳು ಆಯೋಜನೆಗೊಂಡಿವೆ ಮತ್ತು ಲಕ್ಷಾಂತರ ಜನರು ತಮ್ಮ ವಿವರಗಳನ್ನು ನವೀಕರಿಸಿದ್ದಾರೆ. ಈಗಲೂ ಮರು ಕೆವೈಸಿ ಮಾಡಿಸದವರು ಹತ್ತಿರದ ಬ್ಯಾಂಕ್ ಹಾಗೂ ಪೋಸ್ಟ್ ಆಫೀಸ್ ಗಳಿಗೆ ತೆರಳಿ ಪ್ರಕ್ರಿಯೆ ಪೂರ್ಣಗೊಳಿಸಬಹುದಾಗಿದೆ.
ಹಾಗಂತ, ಜನಧನ್ ಖಾತೆ ಇರುವವರು ಎಲ್ಲರೂ ಮರು ಕೆವೈಸಿ ಮಾಡಿಸಬೇಕಿಲ್ಲ. 2014-15ರಲ್ಲಿ ಜನಧನ್ ಖಾತೆ ತೆರೆದವರು ಮಾತ್ರ ಮರು ಕೆವೈಸಿ ಮಾಡಿಸಬೇಕಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಗಳ ಪ್ರಕಾರ, ಬ್ಯಾಂಕ್ ಖಾತೆ ತೆರೆದ 10 ವರ್ಷಗಳ ಬಳಿಕ ಮರು ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.