ಬೆಂಗಳೂರು: ಜುಲೈ ತಿಂಗಳ ಮೊದಲ ದಿನವೇ ಜನರಿಗೆ ಗುಡ್ ನ್ಯೂಸ್ ಸಿಕ್ಕಿದೆ. ತೈಲ ಮಾರುಕಟ್ಟೆ ಕಂಪನಿಗಳು ಎಲ್ ಪಿಜಿ ವಾಣಿಜ್ಯ ಬಳಕೆ ಸಿಲಿಂಡರ್ ಗಳ (LPG cylinders) ಬೆಲೆಯನ್ನು ಪರಿಷ್ಕರಣೆ ಮಾಡಿದ್ದು, 19 ಕೆ.ಜಿ ಸಿಲಿಂಡರ್ ಗಳ ಬೆಲೆಯಲ್ಲಿ 58.50 ರೂಪಾಯಿ ಇಳಿಕೆ ಮಾಡಿವೆ. ಇನ್ನು, ಗೃಹಬಳಕೆಯ 14.2 ಕೆ.ಜಿ ಸಿಲಿಂಡರ್ ಗಳ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ಹೊಸ ದರ ಪಟ್ಟಿಯ ಪ್ರಕಾರ, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ 1,665 ರೂ. ಇದೆ. ಜೂನ್ ನಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1,723.50 ರೂ. ಆಗಿತ್ತು. ಕಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1,826 ರೂ. ಗಳ ಬದಲಾಗಿ 1,769 ರೂಪಾಯಿಗೆ ಸಿಗಲಿದೆ. ಮುಂಬೈನಲ್ಲಿ 1674.50 ರೂ.ಗಳ ಬದಲಿಗೆ 1,616 ರೂ ಮತ್ತು ಚೆನ್ನೈನಲ್ಲಿ 1823.50 ರೂ.ಗಳ ಬದಲಿಗೆ 1881 ರೂ.ಗೆ 19 ಕೆಜಿ ಎಲ್ಪಿಜಿ ಸಿಲಿಂಡರ್ ದೊರೆಯಲಿದೆ.
ಬೆಂಗಳೂರಿನಲ್ಲಿಯೂ ದರ ಪರಿಷ್ಕರಣೆಯಾಗಿದೆ. ರಾಜ್ಯ ರಾಜಧಾನಿಯಲ್ಲಿ ಸಿಲಿಂಡರ್ ಬೆಲೆ 1,762 ರೂ. ಇದೆ. ವಾಣಿಜ್ಯ ಸಿಲಿಂಡರ್ ಬೆಲೆ 58.50 ರೂ. ಕಡಿಮೆಯಾಗಿದೆ. ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ವಾಣಿಜ್ಯ ಸಿಲಿಂಡರ್ ಅಗ್ಗವಾಗುತ್ತಿರುವುದರಿಂದ, ಹೋಟೆಲ್ ಗಳು, ರೆಸ್ಟೋರೆಂಟ್ ಗಳಲ್ಲಿ ಆಹಾರದ ಬೆಲೆ ಕಡಿಮೆಯಾಗುತ್ತಿರುವ ಸಾಧ್ಯತೆ ಇದೆ.
ಇದರೊಂದಿಗೆ ಸತತ ಎರಡನೇ ತಿಂಗಳೂ ವಾಣಿಜ್ಯ ಬಳಕೆ ಸಿಲಿಂಡರ್ ಗಳ ಬೆಲೆ ಇಳಿದಂತಾಗಿದೆ. ಜೂನ್ 1ರಂದು 24 ರೂಪಾಯಿ ಇಳಿಕೆ ಮಾಡಲಾಗಿತ್ತು. ಪ್ರತಿ ತಿಂಗಳ 1ನೇ ತಾರೀಖಿನಂದು ತೈಲ ಮಾರುಕಟ್ಟೆ ಕಂಪನಿಗಳು ಸಿಲಿಂಡರ್ ಗಳ ಬೆಲೆಯನ್ನು ಪರಿಷ್ಕರಣೆ ಮಾಡುತ್ತವೆ. ಕೆಲವೊಮ್ಮೆ ಬೆಲೆಯೇರಿಕೆಯಾಗುವ ಸಾಧ್ಯತೆಯೂ ಇರುತ್ತದೆ. ಕಳೆದ ಫೆಬ್ರವರಿಯಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ 7 ರೂ. ಇಳಿಕೆ ಮಾಡಲಾಗಿತ್ತು. ಆದರೆ ಮಾರ್ಚ್ ನಲ್ಲಿ ಮತ್ತೆ 6 ರೂ. ಹೆಚ್ಚಳ ಮಾಡಲಾಗಿತ್ತು.