ಗ್ರಾಹಕರ ಒತ್ತಾಯದ ಹೊರತಾಗಿಯೂ ಕನ್ನಡ ಮಾತನಾಡಲು ನಿರಾಕರಿಸಿದ್ದಕ್ಕಾಗಿ ಬೆಂಗಳೂರಿನ ಚಂದಾಪುರ ಸೂರ್ಯಸಿಟಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಮಹಿಳಾ ಮ್ಯಾನೇಜರ್ ಅವರನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.

ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಮಾತನಾಡಲು ನಿರಾಕರಿಸಿ ನಾಗರಿಕರನ್ನು ಕಡೆಗಣಿಸಿರುವ ಆನೇಕಲ್ ತಾಲೂಕಿನ ಸೂರ್ಯಸಿಟಿಯ ಎಸ್ ಬಿಐ ಶಾಖಾ ವ್ಯವಸ್ಥಾಪಕರ ವರ್ತನೆ ತೀವ್ರ ಖಂಡನೀಯ ಎಂದು ಸಿದ್ದರಾಮಯ್ಯ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಅಧಿಕಾರಿಗಳನ್ನು ವರ್ಗಾವಣೆ ಮಾಡುವಲ್ಲಿ ಎಸ್ ಬಿಐನ ತ್ವರಿತ ಕ್ರಮವನ್ನು ನಾವು ಪ್ರಶಂಸಿಸುತ್ತೇವೆ. ಅದಾಗ್ಯೂ, ಇಂತಹ ಘಟನೆಗಳು ಮರುಕಳಿಸಬಾರದು. ಎಲ್ಲಾ ಬ್ಯಾಂಕ್ ಉದ್ಯೋಗಿಗಳು ಗ್ರಾಹಕರನ್ನು ಘನತೆಯಿಂದ ನಡೆಸಕೊಳ್ಳಬೇಕು. ಸ್ಥಳೀಯ ಭಾಷೆಯಲ್ಲಿ ಮಾತನಾಡಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂದಿದ್ದಾರೆ. ಭಾರತದಾದ್ಯಂತ ಎಲ್ಲ ಬ್ಯಾಂಕ್ ಸಿಬ್ಬಂದಿಗೆ ಸಾಂಸ್ಕೃತಿಕ ಮತ್ತು ಭಾಷಾ ಸಂವೇದನಾ ತರಬೇತಿಯನ್ನು ಕಡ್ಡಾಯಗೊಳಿಸಬೇಕೆಂದು ನಾವು ಹಣಕಾಸು ಸಚಿವಾಲಯ ಮತ್ತು ಹಣಕಾಸು ಸೇವೆಗಳ ಇಲಾಖೆಯನ್ನು ಒತ್ತಾಯಿಸುತ್ತೇನೆ. ಸ್ಥಳೀಯ ಭಾಷೆಯನ್ನು ಗೌರವಿಸುವುದು ಎಂದರೆ ಜನರನ್ನು ಗೌರವಿಸುವುದಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.