ಬೆಂಗಳೂರು: ನಟ, ಚಿತ್ರ ನಿರ್ದೇಶಕ – ನಿರ್ಮಾಪಕ ಬಿ. ಸುರೇಶ ಮತ್ತು ಶೈಲಜಾ ನಾಗ್ ಅವರ ಮಗಳು ರಂಗಪ್ರವೇಶ ಮಾಡಿದ್ದಾರೆ.
ಪತ್ರಕರ್ತೆ ಡಾ.ವಿಜಯಮ್ಮ ಅವರ ಮೊಮ್ಮಗಳು ಚಂದನ ನಾಗ್ ರಂಗಪ್ರವೇಶಕ್ಕೆ ಕಲಾವಿದರು ಮತ್ತು ಸಾಹಿತ್ಯ ಲೋಕದ ದಿಗ್ಗಜರು ಸಾಕ್ಷಿಯಾಗಿದ್ದರು.
ಚಂದನಾ ಭರತನಾಟ್ಯದ ಆರಂಭಿಕ ಪಾಠಗಳನ್ನು ಗುರು ಭಾನುಮತಿ ಅವರಲ್ಲಿ ಬಹಳ ವರ್ಷ ಕಲಿತು, ನಂತರ ಐದು ವರ್ಷ ದಿಂದ ಸ್ನೇಹಾ ಕಪ್ಪಣ್ಣ ಅವರ ಬಳಿ ಕಲಿಕೆ ಮುಂದುವರೆಸಿದ್ದಾರೆ. ಇಷ್ಟು ಕಾಲದ ಸಿದ್ಧತೆಯ ನಂತರ ಈಗ ರಂಗಪ್ರವೇಶ ಮಾಡಿದರು.
ಈ ರಂಗಪ್ರವೇಶ ಕಾರ್ಯಕ್ರಮದಲ್ಲಿ ಹಿರಿಯ ಭರತನಾಟ್ಯ ಕಲಾವಿದೆ, ಗುರು ಲಲಿತಾ ಶ್ರೀನಿವಾಸನ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರು ಹಾಗೂ ಪ್ರಸಿದ್ಧ ಕಲಾವಿದೆ ಶುಭ ಧನಂಜಯ ಮತ್ತು ಪದ್ಮಶ್ರೀ ಪ್ರಶಸ್ತಿ ವಿಜೇತೆ ಹಾಗೂ ಅಂತಾರಾಷ್ಟ್ರೀಯ ನೃತ್ಯ ಕಲಾವಿದೆ ಪ್ರತಿಭಾ ಪ್ರಹ್ಲಾದ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಹಂಸಲೇಖಾ , ಎಸ್.ಜಿ.ಸಿದ್ದರಾಮಯ್ಯ , ಕನ್ನಡ ಸಾಂಸ್ಕೃತಿಕ ಲೋಕದ ದಿಗ್ಗಜರಾದ ಚಿರಂಜೀವಿ ಸಿಂಗ್, ಬಿಎಲ್ ಶಂಕರ್, ಜಿ. ರಾಮಕೃಷ್ಣ , ಗಿರಿಜಾ ಲೋಕೇಶ್, ಗಿರೀಶ್ ಕಾಸರವಳ್ಳಿ, ಜಯಂತ್ ಕಾಯ್ಕಿಣಿ, ವಿ. ಹರಿಕೃಷ್ಣ , ಯೋಗರಾಜ್ ಭಟ್ , ವೈಕೆ ಮುದ್ದುಕೃಷ್ಣ, ವನಮಾಲ ವಿಶ್ವನಾಥ್, ಅರುಂಧತಿ ನಾಗ್ , ನಟ ಕಿಶೋರ್ ಮತ್ತು ನೃತ್ಯ, ಸಂಗೀತ ಕ್ಷೇತ್ರದ ಗಣ್ಯರೂ ಸೇರಿದಂತೆ ಕಲಾಭಿಮಾನಿಗಳೂ ಈ ಕಾರ್ಯಕ್ರಮದಲ್ಲಿ ಇದ್ದು ಚಂದನಾ ನಾಗ್ ರಂಗಪ್ರವೇಶಕ್ಕೆ ಸಾಕ್ಷಿಯಾದರು.