ಚಾಮರಾಜನಗರ: ಕಾವೇರಿ ಮಾತೆ ತಮಿಳುನಾಡಿನ ನೀರಿನ ದಾಹವನ್ನು ತಣಿಸಿದ್ದಾಳೆ. ರಾಜ್ಯದ ಕೆಆರ್‌ಎಸ್ ಜಲಾಶಯ ಭರ್ತಿಯಾಗಿದ್ದು, ಇನ್ನೊಂದೆಡೆ ತಮಿಳುನಾಡಿನ ಮೆಟ್ಟೂರು ಜಲಾಶಯ ಕೂಡ ಭರ್ತಿಯಾಗಿದೆ.
120 ಅಡಿ ಸಾಮರ್ಥ್ಯದ ಮೆಟ್ಟೂರು ಜಲಾಶಯ ಭರ್ತಿಯಾಗಿದೆ. ಕಳೆದ ಒಂದು ವಾರದಿಂದ ಕೆ.ಆರ್.ಎಸ್ ಹಾಗೂ ಕಬಿನಿ ಜಲಾಶಯಗಳಿಂದ ಭಾರೀ ಪ್ರಮಾಣದಲ್ಲಿ ಮೆಟ್ಟೂರು ಜಲಾಶಯಕ್ಕೆ ಕಾವೇರಿ ನೀರು ಹರಿದು ಬರುತ್ತಿದೆ. ಮೆಟ್ಟೂರು ಜಲಾಶಯದಲ್ಲಿ 93.470 ಟಿಎಂಸಿ ನೀರು ಸಂಗ್ರಹವಾಗಿದೆ. ಒಳ ಹರಿವು 58 ಸಾವಿರ ಕ್ಯೂಸೆಕ್ ನೀರಿದೆ. ಮೆಟ್ಟೂರು ಜಲಾಶಯದಿಂದ ಕಾವೇರಿ ನದಿಗೆ 58 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.