ತಿರುವನಂತಪುರಂ: ಕೇರಳಕ್ಕೆ ವಕ್ಕರಿಸಿರುವ ‘ಮೆದುಳು ತಿನ್ನುವ ಅಮೀಬಾ’ ಸೋಂಕು ರಾಜ್ಯಾದ್ಯಂತ ಆತಂಕಕ್ಕೆ ಕಾರಣವಾಗಿದ್ದು, ಈ ವರ್ಷ ಈವರೆಗೆ 19 ಮಂದಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಆರೋಗ್ಯ ಇಲಾಖೆ ತೀವ್ರ ಕಟ್ಟೆಚ್ಚರ ವಹಿಸಿದೆ. ಪ್ರೈಮರಿ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (ಪಿಎಎಂ) ಎಂದು ಕರೆಯಲ್ಪಡುವ ಈ ಮೆದುಳಿನ ಸೋಂಕು, ನೆಗೆರಿಯಾ ಫೌಲೆರಿ ಎಂಬ ಅಮೀಬಾದಿಂದ ಉಂಟಾಗುತ್ತದೆ ಮತ್ತು ಇದು ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿದೆ.
“ಹೆಚ್ಚುತ್ತಿರುವ ಪ್ರಕರಣಗಳು”
ಈ ವರ್ಷ ಕೇರಳದಲ್ಲಿ 69 ಪಿಎಎಂ ಪ್ರಕರಣಗಳು ದೃಢಪಟ್ಟಿದ್ದು, 19 ಜನರು ಸಾವನ್ನಪ್ಪಿದ್ದಾರೆ. ಕಳೆದ ಕೆಲವು ವಾರಗಳಲ್ಲಿ ಸಾವುಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಇದು ಗಂಭೀರ ಸಾರ್ವಜನಿಕ ಆರೋಗ್ಯ ಸವಾಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ಕಳೆದ ವರ್ಷದಂತೆ ಈ ಬಾರಿ ಒಂದೇ ನೀರಿನ ಮೂಲಕ್ಕೆ ಸಂಬಂಧಿಸಿದ ಪ್ರಕರಣಗಳು ಕಂಡುಬರುತ್ತಿಲ್ಲ. ಬದಲಾಗಿ, ರಾಜ್ಯದಾದ್ಯಂತ ಇಂಥ ಪ್ರಕರಣಗಳು ವರದಿಯಾಗುತ್ತಿರುವುದು ಸಾಂಕ್ರಾಮಿಕ ರೋಗಶಾಸ್ತ್ರೀಯ ತನಿಖೆಗಳನ್ನು ಸಂಕೀರ್ಣಗೊಳಿಸಿದೆ ಎಂದು ಅವರು ಹೇಳಿದ್ದಾರೆ.
ಏನಿದು ಪಿಎಎಂ? ಸೋಂಕು ಹೇಗೆ ಹರಡುತ್ತದೆ?
ಕೇರಳ ಸರ್ಕಾರದ ದಾಖಲೆಗಳ ಪ್ರಕಾರ, ಪಿಎಎಂ ನೇರವಾಗಿ ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಈ ಸೋಂಕು ಮೆದುಳಿನ ಅಂಗಾಂಶವನ್ನು ನಾಶಪಡಿಸಿ, ತೀವ್ರವಾದ ಊತವನ್ನು ಉಂಟುಮಾಡುತ್ತದೆ. ನಂತರ ಆ ರೋಗಿಯ ಸಾವಿಗೆ ಕಾರಣವಾಗುತ್ತದೆ. ಇದೊಂದು ಅಪರೂಪದ ಸೋಂಕಾಗಿದ್ದು, ಸಾಮಾನ್ಯವಾಗಿ ಆರೋಗ್ಯವಂತ ಮಕ್ಕಳು ಮತ್ತು ಯುವಕರಲ್ಲಿ ಕಂಡುಬರುತ್ತದೆ.
ಬೆಚ್ಚಗಿನ, ವಿಶೇಷವಾಗಿ ನಿಂತ ಶುದ್ಧ ನೀರಿನಲ್ಲಿ ಈ ಅಮೀಬಾ ವಾಸಿಸುತ್ತದೆ. ಆದರೆ ಕಲುಷಿತ ನೀರಿನಲ್ಲಿ ಈಜುವಾಗ, ಧುಮುಕುವಾಗ ಅಥವಾ ಸ್ನಾನ ಮಾಡುವಾಗ ಮೂಗಿನ ಮೂಲಕ ಅಮೀಬಾ ದೇಹವನ್ನು ಪ್ರವೇಶಿಸುತ್ತದೆ. ವಿಶೇಷವೆಂದರೆ, ಕಲುಷಿತ ನೀರನ್ನು ಕುಡಿಯುವುದರಿಂದ ಈ ರೋಗ ಬರುವುದಿಲ್ಲ. ಅಲ್ಲದೆ, ಇದು ಒಬ್ಬರಿಂದೊಬ್ಬರಿಗೆ ಹರಡುವುದಿಲ್ಲ. ಜಾಗತಿಕ ತಾಪಮಾನ ಏರಿಕೆಯಿಂದ ನೀರಿನ ಉಷ್ಣತೆ ಹೆಚ್ಚಾಗುತ್ತಿರುವುದು ಮತ್ತು ಬಿಸಿಲಿನಿಂದಾಗಿ ಹೆಚ್ಚು ಜನರು ಜಲಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಈ ರೋಗದ ಅಪಾಯವನ್ನು ಹೆಚ್ಚಿಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರೋಗದ ಲಕ್ಷಣಗಳು ಮತ್ತು ಚಿಕಿತ್ಸೆ
ಪಿಎಎಂ ಸೋಂಕನ್ನು ಪತ್ತೆಹಚ್ಚುವುದು ಕಷ್ಟಕರವಾಗಿರುವುದರಿಂದ ಇದರಿಂದ ಉಂಟಾಗುವ ಮರಣ ಪ್ರಮಾಣ ಹೆಚ್ಚಾಗಿದೆ. ಇದರ ಲಕ್ಷಣಗಳು ಬ್ಯಾಕ್ಟೀರಿಯಾದಿಂದ ಬರುವ ಮೆನಿಂಜೈಟಿಸ್‌ನಂತೆಯೇ ಇರುತ್ತವೆ. ತಲೆನೋವು, ಜ್ವರ, ವಾಕರಿಕೆ ಮತ್ತು ವಾಂತಿ ಪ್ರಮುಖ ಲಕ್ಷಣಗಳಾಗಿವೆ. ಸೋಂಕಿನ ಲಕ್ಷಣಗಳು ಒಂದರಿಂದ ಒಂಬತ್ತು ದಿನಗಳ ನಡುವೆ ಕಾಣಿಸಿಕೊಳ್ಳಬಹುದು. ರೋಗವನ್ನು ಬೇಗನೆ ಪತ್ತೆಹಚ್ಚಲು ವಿಫಲವಾದರೆ, ಮೆದುಳಿನ ಊತವು ವೇಗವಾಗಿ ಹೆಚ್ಚಾಗಿ ಸಾವಿಗೆ ಕಾರಣವಾಗುತ್ತದೆ. ಆರಂಭಿಕ ಹಂತದಲ್ಲಿ ರೋಗವನ್ನು ಪತ್ತೆಹಚ್ಚುವುದು ಚಿಕಿತ್ಸೆಗೆ ಅತ್ಯಂತ ನಿರ್ಣಾಯಕ ಎಂದು ಸಚಿವೆ ವೀಣಾ ಜಾರ್ಜ್ ಒತ್ತಿ ಹೇಳಿದ್ದಾರೆ.
ಸರ್ಕಾರ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳು
ಕೇರಳದಲ್ಲಿ 2016ರಲ್ಲಿ ಮೊದಲ ಪಿಎಎಂ ಪ್ರಕರಣ ವರದಿಯಾಗಿತ್ತು. 2023ರವರೆಗೆ ಕೇವಲ ಎಂಟು ಪ್ರಕರಣಗಳು ದೃಢಪಟ್ಟಿದ್ದವು. ಆದರೆ ಕಳೆದ ವರ್ಷ 36 ಪ್ರಕರಣಗಳು ಮತ್ತು ಒಂಬತ್ತು ಸಾವುಗಳು ವರದಿಯಾಗಿದ್ದವು. ಈ ವರ್ಷ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿದೆ.
ಸೋಂಕು ಹರಡುವುದನ್ನು ತಡೆಯಲು, ಕೊಳಗಳು ಮತ್ತು ಕೆರೆಗಳಂತಹ ಸಂಸ್ಕರಿಸದ ಅಥವಾ ನಿಂತ ಶುದ್ಧ ನೀರಿನಲ್ಲಿ ಈಜುವುದನ್ನು ಅಥವಾ ಸ್ನಾನ ಮಾಡುವುದನ್ನು ತಪ್ಪಿಸುವಂತೆ ಜನರಿಗೆ ಸಲಹೆ ನೀಡಲಾಗಿದೆ. ಈಜುಗಾರರು ಮೂಗಿಗೆ ಕ್ಲಿಪ್‌ಗಳನ್ನು ಬಳಸಬೇಕು ಮತ್ತು ಬಾವಿಗಳು ಹಾಗೂ ನೀರಿನ ಟ್ಯಾಂಕ್‌ಗಳನ್ನು ಸರಿಯಾಗಿ ಸ್ವಚ್ಛಗೊಳಿಸಿ ಕ್ಲೋರಿನೇಷನ್ ಮಾಡಲು ಸೂಚಿಸಲಾಗಿದೆ. ಸೋಂಕಿನ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯುವಂತೆ ಆರೋಗ್ಯ ಇಲಾಖೆ ಜನರಲ್ಲಿ ಮನವಿ ಮಾಡಿದೆ.