ಬಳ್ಳಾರಿ: ಕಳೆದ ಎರಡು ದಿನಗಳ ಹಿಂದಷ್ಟೇ ಕಾಣೆಯಾಗಿದ್ದ ಬಾಲಕ ಬಾವಿಯೊಂದರಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾವಿಹಾಳ್ ಗ್ರಾಮದಲ್ಲಿ ನಡೆದಿದೆ.
ವಿರೇಶ್ ಎನ್ನುವವರ ಪುತ್ರ ಸಿರಿ (4) ಬಾವಿಯಲ್ಲಿ ಬಿದ್ದು ಮೃತಪಟ್ಟಿರುವ ಬಾಲಕ.
ಗುರುವಾರ ಏಕಾಏಕಿ ನಾಪತ್ತೆಯಾಗಿದ್ದ ಬಾಲಕ ಸಿರಿ ಆಟವಾಡಲು ಹೋಗಿ ಬಾವಿಯಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಕುಟುಂಬಸ್ಥರು ಹಾಗೂ ಗ್ರಾಮಸ್ಥರು ತೀವ್ರ ಹುಡುಕಾಟ ನಡೆಸಿದ್ದಾರೆ.
ಶುಕ್ರವಾರ ಸಂಜೆ ಗ್ರಾಮಸ್ಥರು ಬಾವಿಯಲ್ಲಿ ಶವ ತೇಲುವುದನ್ನು ಗಮನಿಸಿದ್ದರು. ಬಳಿಕ ಶವ ಹೊರತೆಗೆದಾಗ ಬಾಲಕ ಸಿರಿ ಎಂಬುದು ತಿಳಿದು ಬಂದಿದೆ. ಸದ್ಯ, ಬಾಲಕನ ಶವವನ್ನು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬಾವಿಗೆ ಎತ್ತರದ ತಡೆಗೋಡೆಗಳು ಇಲ್ಲದಿರುವುದೇ ಈ ಘಟನೆಗೆ ಕಾರಣ ಎನ್ನಲಾಗಿದೆ.
ಗ್ರಾಮಸ್ಥರು ಹಲವು ಬಾರಿ ಬಾವಿ ಸುತ್ತ ಎತ್ತರದ ಗೋಡೆ ಕಟ್ಟಿಸುವಂತೆ ಶಾಸಕರು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ, ಆದರೆ ಅವರು ನಿರ್ಲಕ್ಷ್ಯ ಮಾಡಿರುವುದರಿಂದ ಈ ಅವಘಡ ಸಂಭವಿಸಿದೆ ಎಂದು ಆರೋಪಿಸಿದ್ದಾರೆ.