ಬೆಂಗಳೂರು ಗ್ರಾಮಾಂತರ : ಗಣೇಶ ವಿಸರ್ಜನೆ ವೇಳೆ ಪಟಾಕಿ ಸಿಡಿದು 15 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ದೊಡ್ಡಬಳ್ಳಾಪುರ ಹೊರವಲಯದ ಮುತ್ತೂರು ಗ್ರಾಮದಲ್ಲಿ ನಡೆದಿದೆ.
ತನುಷ್ ರಾವ್ ಮೃತ ಬಾಲಕ.
ದೊಡ್ಡಬಳ್ಳಾಪುರ ನಗರದ ಮುತ್ತೂರು ವಾರ್ಡ್ ನಲ್ಲಿ ಫ್ರೆಂಡ್ಸ್ ವಿನಾಯಕ ಬಳಗ ಗಣೇಶನ ವಿಸರ್ಜನೆ ಮಾಡಲು ಪ್ರೋ ಲಿಫ್ಟ್ ವಾಹನದಲ್ಲಿ ಗಣೇಶನ ಮೆರವಣಿಗೆ ಮಾಡಲಾಗುತ್ತಿತ್ತು. ಈ ವೇಳೆ ಪೋರ್ ಲಿಫ್ಟ್ ವಾಹನದಲ್ಲಿ ಇಡಲಾಗಿದ್ದ ಪಟಾಕಿಗಳು ಸ್ಫೋಟಗೊಂಡು ದುರಂತ ಸಂಭವಿಸಿದೆ.
ಮಾಧ್ಯಮದೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಪೋರ್ ಲಿಫ್ಟ್ ವಾಹನದಲ್ಲಿ ಗಣೇಶನನ್ನು ಮೆರವಣಿಗೆ ಮಾಡುವಾಗ, ಕಾರ್ಯಕ್ರಮದ ಆಯೋಜಕರು ವಾಹನದ ಸೈಲೆಸ್ಸರ್ ಪಕ್ಕದಲ್ಲಿಯೇ ಪಟಾಕಿ ಇಟ್ಟಿದ್ದರು. ಸೈಲೆಸ್ಸರ್ ತಾಪಕ್ಕೆ ಪಟಾಕಿಗಳು ಸ್ಫೋಟಗೊಂಡಿವೆ. ರಾಕೆಟ್ ಗಳು ಸುತ್ತಮುತ್ತ ಹಾಗೂ ಕೆಲವು ವ್ಯಕ್ತಿಗಳ ಮೇಲೆ ನುಗ್ಗಿವೆ. ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಝಾಕೀರ್ ಹುಸೇನ್ ಅವರ ಎಡಗೈಗೆ ಗಾಯವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಕೆಟ್ ಗಳು 15 ವರ್ಷದ ಬಾಲಕ ತನುಷ್ ರಾವ್ ಪಕ್ಕೆಲುಬುಗಳಿಗೆ ನುಗ್ಗಿದ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಮತ್ತೊಂದು ಮಗುವಿನ ಸ್ಥಿತಿ ಗಂಭೀರವಾಗಿದ್ದು, ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದು, ಇನ್ನುಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಆಯೋಜಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. 13 ಮತ್ತು 16 ವರ್ಷ ವಯಸ್ಸಿನ ಇಬ್ಬರು ಮಕ್ಕಳು, ಪ್ರೋ ಲಿಫ್ಟ್ ಚಾಲಕ ಮುನಿರಾಜು (27) ಮತ್ತು ಪಕ್ಕದಲ್ಲಿದ್ದ ನಾಗರಾಜ್ (35) ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.