ಬೆಂಗಳೂರು: ಸಿಲಿಕಾನ್ ಸಿಟಿಯ ಖಾಸಗಿ ಶಾಲೆ(private school) ಬಾಂಬ್ ಬೆದರಿಕೆ ಬಂದಿದ್ದು, ಆತಂಕಕ್ಕೆ ಕಾರಣವಾಗಿದೆ.
ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿರುವ ಘಟನೆ ಬೆಂಗಳೂರಿನ ಗೋವಿಂದಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಂದು ಬೆಳಿಗ್ಗೆ ಇಂಡಿಯನ್ ಪಬ್ಲಿಕ್ ಶಾಲೆ ಆವರಣದಲ್ಲಿ 5 ಪೈಪ್ ಲೈನ್ ಬಾಂಬ್ ಇಡಲಾಗಿದೆ ಎಂದು Father Kodachi ಹೆಸರಿನ coldghost456@gmail.com askbirnorth@tipsglobal.net ಎಂಬ ಐಡಿಯಿಂದ ಬಾಂಬ್ ಬೆದರಿಕೆ ಹಾಕಲಾಗಿದೆ.
ಮಧ್ಯಾಹ್ನ 1.30ಕ್ಕೆ ಬಾಂಬ್ ಬ್ಲಾಸ್ಟ್ ಆಗುತ್ತೆಂದು ತಿಳಿಸಲಾಗಿತ್ತು. ಮಾಹಿತಿ ಬಂದ ಕೂಡಲೇ ಶಾಲೆಗೆ ಭೇಟಿ ನೀಡಿದ ಗೋವಿಂದಪುರ ಪೊಲೀಸರು ಹಾಗೂ ಬಾಂಬ್ ಸ್ಕ್ವಾಡ್ ಪರಿಶೀಲನೆ ನಡೆಸಿದರು. ಆದರೆ, ಪರಿಶೀಲನೆ ಸಂದರ್ಭದಲ್ಲಿ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಈ ಕುರಿತು ಶಾಲೆಯ ಆಡಳಿತಾಧಿಕಾರಿ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
ಇತ್ತೀಚೆಗಷ್ಟೇ ಬೆಂಗಳೂರಿನ ಜೆ.ಪಿ.ನಗರದ 4ನೇ ಹಂತದಲ್ಲಿರುವ ‘ಬ್ರಾಡ್ ಕಾಂ’ ಕಂಪನಿಗೆ ಬೆಳಗ್ಗೆ 11:50ರ ಸುಮಾರಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು. ಕೂಡಲೇ ಸ್ಥಳಕ್ಕಾಗಮಿಸಿದ್ದ ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸರು ಪರಿಶೀಲನೆ ನಡೆಸಿದ್ದರು. ಈ ಕುರಿತು ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಮೂಲಕ ಒಂದೇ ತಿಂಗಳಲ್ಲಿ ಎರಡನೇ ಬಾರಿ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.