ಇಸ್ಲಾಮಾಬಾದ್: ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತವೂ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ಪಾಕ್ ಉಗ್ರರನ್ನು ಮಟ್ಟಹಾಕಿದೆ. ಇದರೊಂದಿಗೆ ಉಗ್ರ ಪೋಷಣೆಯ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಲಾಗಿದೆ. ಇದರ ಬೆನ್ನಲ್ಲೇ, ಗುರುವಾರ ಬೆಳಗಿನ ಜಾವ ಬಲೂಚಿಸ್ತಾನದಲ್ಲಿ ಬಿಎಲ್ಎ ನಡೆಸಿದ ದಾಳಿಗೆ ಪಾಕಿಸ್ತಾನದ 14 ಸೈನಿಕರು ಬಲಿಯಾಗಿದ್ದಾರೆ. ಅಷ್ಟೇ ಅಲ್ಲ, ಲಾಹೋರ್ ನಲ್ಲಿ ಸರಣಿ ಸ್ಫೋಟಗಳು ಸಂಭವಿಸಿದ್ದು, ಪಾಕ್ ಸರ್ಕಾರದ ನಿದ್ದೆಗೆಡಿಸಿದೆ.
ಹೌದು, ಲಾಹೋರ್ ವಿಮಾನ ನಿಲ್ದಾಣದ ಬಳಿ ಗುರುವಾರ ಬೆಳಗ್ಗೆ ಸರಣಿ ಸ್ಫೋಟಗಳು ಸಂಭವಿಸಿವೆ. ವಾಲ್ಟನ್ ವಿಮಾನ ನಿಲ್ದಾಣದ ಬಳಿಯ ಗೋಪಾಲ್ ನಗರ ಹಾಗೂ ನಸೀರಾಬಾದ್ ನಲ್ಲಿ ಸರಣಿ ಸ್ಫೋಟ ಸಂಭವಿಸಿದ್ದು, ಭಾರಿ ಸದ್ದು ಹಾಗೂ ದಟ್ಟವಾದ ಹೊಗೆ ಆವರಿಸಿದೆ. ಇದರಿಂದಾಗಿ ಪಾಕಿಸ್ತಾನದ ಸೇನೆಯು ಹೈ ಅಲರ್ಟ್ ಆಗಿದೆ ಎಂದು ತಿಳಿದುಬಂದಿದೆ.
ಸತತವಾಗಿ ಸ್ಫೋಟದ ಸದ್ದು ಕೇಳಿಸಿದೆ ಹಾಗೂ ಭಾರಿ ಪ್ರಮಾಣದಲ್ಲಿ ಹೊಗೆಯಾಡುತ್ತಿದೆ. ಇದಾದ ಬಳಿಕ ಮನೆಯಲ್ಲಿದ್ದ ಜನ ಓಡಿಹೋಗುತ್ತಿರುವ ದೃಶ್ಯಗಳು ಲಭ್ಯವಾಗಿವೆ. ಆದಾಗ್ಯೂ, ಸ್ಫೊಟದ ಸ್ಥಳಗಳಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸೈನಿಕರು ಆಗಮಿಸಿದ್ದಾರೆ ಎನ್ನಲಾಗಿದೆ. ಸರಣಿ ಸ್ಫೋಟದ ಸದ್ದುಗಳಿಂದಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಲಾಹೋರ್ ನಲ್ಲಿ ಯಾರು ಸರಣಿ ಸ್ಫೋಟ ಮಾಡಿದ್ದಾರೆ ಎಂಬುದು ಇದುವರೆಗೆ ತಿಳಿದುಬಂದಿಲ್ಲ. ಬಲೂಚಿಸ್ತಾನದಲ್ಲಿ ನಡೆದ ದಾಳಿಯ ಹೊಣೆಯನ್ನು ಬಿಎಲ್ಎ ಹೊತ್ತುಕೊಂಡಿದೆ. ಆದರೆ, ಲಾಹೋರ್ ನಲ್ಲಿ ಯಾರು ದಾಳಿ ಮಾಡಿದ್ದಾರೆ ಎಂಬುದರ ಕುರಿತು ಇದುವರೆಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಪಾಕಿಸ್ತಾನದ ಬೃಹತ್ ನಗರಗಳಲ್ಲಿ ಲಾಹೋರ್ ಕೂಡ ಒಂದಾಗಿರುವುದರಿಂದ ದಾಳಿಯ ಬಳಿಕ ಹೆಚ್ಚಿನ ಆತಂಕ ಸೃಷ್ಟಿಯಾಗಿದೆ.