ಶಾಸಕರಾದ ಎಸ್ ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಗೆ ಬಿಜೆಪಿ ಹೈಕಮಾಂಡ್ ಶಾಕ್ ನೀಡಿದೆ. ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಈ ಇಬ್ಬರು ಶಾಸಕರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಈ ಇಬ್ಬರು ನಾಯಕರು, ತಾವು ಶಾಸಕರಾಗಿ ಆಯ್ಕೆಯಾಗಿ ಬಂದ ಬಿಜೆಪಿ ವಿರುದ್ಧವೇ ಬಹಿರಂಗವಾಗಿ ಹೇಳಿಕೆ ನೀಡುತ್ತಾ ಕೆಂಗಣ್ಣಿಗೆ ಗುರಿಯಾಗಿದ್ರು. ಸಾಲದ್ದಕ್ಕೆ ಕಾಂಗ್ರೆಸ್ ಪರವಾಗಿ ಹೇಳಿಕೆಗಳನ್ನು ನೀಡಿದ್ದು ಈಗ ಮುಳುವಾಗಿದೆ. ಮೊನ್ನೆ ನಡೆದ ಬಮೂಲ್ ಚುನಾವಣೆಯಲ್ಲೂ ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದರು.
ಅಷ್ಟೇ ಅಲ್ಲಾ ಇತ್ತೀಚೆಗೆ ಕ್ಷೇತ್ರದಲ್ಲಿ ನಡೆದ ಬಹುತೇಕ ಎಲ್ಲ ಕಾಂಗ್ರೆಸ್ ಕಾರ್ಯಕ್ರಮಗಳಲ್ಲೂ ಎಸ್ ಟಿ ಸೋಮಶೇಖರ್ ಪಾಲ್ಗೊಂಡಿದ್ರು. ಈ ನಿಟ್ಟಿನಲ್ಲೇ ಅವರ ವಿರುದ್ಧ ಕಠಿಣ ಕ್ರಮಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ದೆಹಲಿ ನಾಯಕರನ್ನು ಆಗ್ರಹಿಸಿದ್ದರು. ಈ ಬಗ್ಗೆ ಅಳೆದು ತೂಗಿ ಕಡೆಗೂ ಪಕ್ಷದ ಹೈಕಮಾಂಡ್ ಯಶವಂತಪುರ ಶಾಸಕ ಸೋಮಶೇಖರ್ ಹಾಗೂ ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ರನ್ನು 6 ವರ್ಷಗಳ ಅವಧಿಗೆ ಉಚ್ಛಾಟನೆ ಮಾಡಿ ಪಕ್ಷ ವಿರೋಧಿ ಚಟುವಟಿಕೆ ಮಾಡೋರಿಗೆ ಕಠಿಣ ಸಂದೇಶ ರವಾನಿಸಿದೆ. ಇತ್ತೀಚೆಗಷ್ಟೇ ವಿಜಯಪುರ ಶಾಸಕರಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧವೂ ಹೈಕಮಾಂಡ್ ಉಚ್ಛಾಟನೆ ಅಸ್ತ್ರ ಪ್ರಯೋಗಿಸಿತ್ತು.