ದಾವಣಗೆರೆ: ಇಲ್ಲಿಯವರೆಗೆ ಯಾವುದ್ಯಾವುದೋ ವಿಷಯಕ್ಕೆ ಕಿತ್ತಾಟ ನಡೆದಿರುವುದನ್ನು ನೋಡಿದ್ದೇವೆ. ಆದರೆ, ಕೋಣಕ್ಕಾಗಿ ಎರಡು ಗ್ರಾಮಗಳ ಮಧ್ಯೆ ಗಲಾಟೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಹರಿಹರ ತಾಲೂಕಿನ ಕುಣಿಬೆಳಕೆರೆ ಮತ್ತು ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮಸ್ಥರ ಮಧ್ಯೆ ಕೋಣಕ್ಕಾಗಿ ಕಿತ್ತಾಟ ನಡೆದಿದೆ. ಸದ್ಯ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದೆ.
ಹರಿಹರ ತಾಲೂಕಿನ ಕುಣಿಬೆಳಕೆರೆಯ ಗ್ರಾಮದಲ್ಲಿ 8 ವರ್ಷಗಳ ಹಿಂದೆ ಗ್ರಾಮದ ಶಕ್ತಿ ದೇವತೆ ಕರಿಯಮ್ಮ ದೇವಿಗೆ ಕೋಣ ಬಿಡಲಾಗಿತ್ತು. ಆದರೆ, ಈ ಕೋಣ ಪಕ್ಕದ ದೇವರ ಬೆಳಕೆರೆ ಗ್ರಾಮಕ್ಕೆ ಹೋಗಿದೆ. ಈ ಮಧ್ಯೆ ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮದ ಕೋಣ ಕೂಡ ಕಾಣೆಯಾಗಿದೆ. ಕುಳಗಟ್ಟೆ ಗ್ರಾಮಸ್ಥರು ಇದು ನಮ್ಮ ಕೋಣ ಎಂದು ತಮ್ಮ ಊರಿಗೆ ಒಯ್ದಿದ್ದಾರೆ. ಹೀಗಾಗಿ ಕುಣಿಬೆಳಕೆರೆ ಗ್ರಾಮಸ್ಥರು ಇದು ನಮ್ಮ ಊರಿನ ಕೋಣ ಎಂದು ಪ್ರತಿಪಾದಿಸಿದ್ದಾರೆ. ಹೀಗಾಗಿ ಎರಡು ಗ್ರಾಮಗಳ ಮಧ್ಯೆ ವ್ಗಾವ್ದ ನಡೆದಿದ್ದು, ಇದು ಪೊಲೀಸ್ ಠಾಣೆಯ ಮೆಟ್ಟಿಲು ಏರಿದೆ.
ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ. ಸದ್ಯ ಡಿಎನ್ ಎ ಪರೀಕ್ಷೆ ಮಾಡಬೇಕೆಂದು ಕೂಡ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.