ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ನಮ್ಮ ಕ್ಲಿನಿಕ್ ಗಳಲ್ಲಿ 48 ಹುದ್ದೆಗಳು ಖಾಲಿ ಇದ್ದು, ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಆಯುಷ್ಮಾನ್ ಭಾರತ್ ಇನ್ ಫ್ರಾಸ್ಟ್ರಕ್ಚರ್ ಮಿಷನ್ (PM BHIM) ಯೋಜನೆ ಅಡಿಯಲ್ಲಿ ನಮ್ಮ ಕ್ಲಿನಿಕ್ ಗಳನ್ನು ನಡೆಸಲಾಗುತ್ತಿದೆ. ಬೆಂಗಳೂರು ನಗರ ಜಿಲ್ಲೆಯ ಹೆಬ್ಬಗೋಡಿ, ಅತ್ತಿಬೆಲೆ, ಬೊಮ್ಮಸಂದ್ರ, ಚಂದಾಪುರ, ಜಿಗಣಿ, ಸರ್ಜಾಪುರ, ದೊಮ್ಮಸಂದ್ರ, ಆನೇಕಲ್, ಹುಣಸಮಾರನಹಳ್ಳಿ, ಮಾದನಾಯಕನಹಳ್ಳಿ, ಚಿಕ್ಕಬಾಣಾವರ ಸೇರಿ ಹಲವೆಡೆ ಕಾರ್ಯನಿರ್ವಹಿಸುವವರು ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಮೇ 19ರಂದು ಸಂದರ್ಶನ ನಡೆಯಲಿದೆ.
ಯಾವ ಹುದ್ದೆ ಎಷ್ಟು ಖಾಲಿ?
19 ವೈದ್ಯಾಧಿಕಾರಿಗಳು, 16 ಶುಶ್ರೂಷಣಾಧಿಕಾರಿಗಳು ಹಾಗೂ 13 ಪ್ರಯೋಗಶಾಲೆ ತಂತ್ರಜ್ಞರ ಹುದ್ದೆಗಳು ಖಾಲಿ ಇವೆ. ವೈದ್ಯಾಧಿಕಾರಿಗಳಿಗೆ ಮಾಸಿಕ 60 ಸಾವಿರ ರೂಪಾಯಿ ವೇತನ ನೀಡಲಾಗುತ್ತದೆ. ಇನ್ನು, ಶುಶ್ರೂಷಣಾಧಿಕಾರಿಗಳಿಗೆ 18,714 ರೂ. ಹಾಗೂ ಪ್ರಯೋಗಶಾಲೆ ತಂತ್ರಜ್ಞರಿಗೆ 16,515 ರೂ. ಸಂಬಳ ನೀಡಲಾಗುತ್ತದೆ.
ವೈದ್ಯಾಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಎಂಬಿಬಿಎಸ್ ಪಾಸಾಗಿರಬೇಕು. ಕಡ್ಡಾಯವಾಗಿ ಇಂಟರ್ನ್ ಶಿಪ್ ಪೂರೈಸಿ ಕೆಎಂಸಿ ನೋಂದಣಿ ಹೊಂದಿರಬೇಕು. ಶುಶ್ರೂಷಣಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ನರ್ಸಿಂಗ್ ಶಾಲೆಯಲ್ಲಿ ಬಿಎಸ್ಸಿ, ಜಿಎನ್ಎಂ ತರಬೇತಿ ಹಾಗೂ ಕೆಎಂಸಿ ನೋಂದಣಿ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಇರುವುದು ಕಡ್ಡಾಯವಾಗಿದೆ.
ಪ್ರಯೋಗಶಾಲೆ ತಂತ್ರಜ್ಞರ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಕೋರ್ಸ್ ಮುಗಿಸಿರಬೇಕು. ಅಲ್ಲದೆ, ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿ ನಡೆಸುವ ಪ್ರಯೋಗಶಾಲೆ ತಂತ್ರಜ್ಞತೆಯಲ್ಲಿ ಮೂರು ವರ್ಷದ ಕೋರ್ಸ್ ಮುಗಿಸಿರಬೇಕು. ಪ್ರಯೋಗಶಾಲೆ ತಂತ್ರಜ್ಞರು ಕಡ್ಡಾಯವಾಗಿ ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಮಾಡಿಕೊಂಡಿರಬೇಕು.
ಸಂದರ್ಶನ ಯಾವಾಗ?
ಮೇ 19ರಂದು ಸಂದರ್ಶನ ನಡೆಯಲಿದೆ. ಜಿಲ್ಲಾ ಆರ್.ಸಿ.ಎಚ್ ಅಧಿಕಾರಿಗಳ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣ, ಹಳೇ ಟಿ.ಬಿ ಆಸ್ಪತ್ರೆ, ಹಳೇ ಮದ್ರಾಸ್ ರಸ್ತೆ, ಸ್ವಾಮಿ ವಿವೇಕನಂದ ಮೆಟ್ರೋ ನಿಲ್ದಾಣದ ಹತ್ತಿರ, ಇಂದಿರಾನಗರ, ಬೆಂಗಳೂರು – 38ಗೆ ಹಾಜರಾಗಿ ಸಂದರ್ಶನ ನೀಡಬಹುದು. ಸಂದರ್ಶನಕ್ಕೆ ಹಾಜರಾಗುವವರು ಮೂಲ ದಾಖಲೆಗಳನ್ನು ಜೆರಾಕ್ಸ್ ಪ್ರತಿಯೊಂದಿಗೆ ತರುವುದು ಕಡ್ಡಾಯ ಎಂದು ತಿಳಿಸಲಾಗಿದೆ.