ಬೆಂಗಳೂರು, ಫೆಬ್ರವರಿ 04: ಪಡುಕೋಣೆ – ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್ ನಲ್ಲಿ ನಡೆದ ಡ್ರೀಮ್ ಸ್ಪೋರ್ಟ್ಸ್ ಚಾಂಪಿಯನ್ ಷಿಪ್ ನ ಬೆಂಗಳೂರು ಚರಣದ ಪಂದ್ಯಗಳಲ್ಲಿ ಚೆನ್ನೈಯಿನ್ ಎಫ್ಸಿ ಮತ್ತು ಬೆಂಗಳೂರು ಎಫ್ಸಿ ತಂಡಗಳು ಕ್ರಮವಾಗಿ 5-0 ಗೋಲುಗಳ ಅಂತರದಲ್ಲಿ ಜಯ ಗಳಿಸಿವೆ.
ಚೆನ್ನೈಯಿನ್ ಎಫ್ಸಿ ತಂಡ ಯಂಗ್ ಬ್ಲೂಸ್ ಎಲೈಟ್ ಎಫ್ ಸಿ ವಿರುದ್ಧ 5-0 ಗೋಲುಗಳಿಂದ ಜಯ ದಾಖಲಿಸಿತು. ಪಂದ್ಯದ ಮೊದಲಾರ್ಧದಲ್ಲಿ ಮರೀನಾ ಮಚಾನ್ಸ್ ತಂಡವು ಎಲ್ಲಾ ಐದು ಗೋಲುಗಳನ್ನು ಗಳಿಸಿ ವಿರಾಮದ ಮೊದಲು ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು.
ನಾಯಕ ಲೈಶ್ರಾಮ್ ಸೂರಜ್ ಸಿಂಗ್(Laishram Suraj Singh) 20 ಮತ್ತು 24ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದಕ್ಕೂ ಮುನ್ನ ಅವಿನಾಶ್ ಸಿಂಗ್ (Avinash Singh) (4ನೇ ನಿ.), ಎಂ.ಡಿ.ಮುಷರಫ್ (18ನೇ ನಿ.) ಮತ್ತು ಸಾಹಿರ್ ಎಂ.ಎಸ್ (26ನೇ ನಿ.) ಅವರು ತಲಾ ಒಂದು ಗೋಲ್ ಗಳಿಸಿ ತಂಡದ ಗೆಲುವಿಗೆ ವೇದಿಕೆ ನಿರ್ಮಿಸಿದರು

ಎರಡನೇ ಪಂದ್ಯದಲ್ಲಿ ಬೆಂಗಳೂರು ಎಫ್ಸಿ ಕೂಡ ಇದೇ ರೀತಿಯ ಗೋಲ್ ಗಳಿಸಿ ಗಮನ ಸೆಳೆಯಿತು. ಬೆಂಗಳೂರಿನ ಬೈಚುಂಗ್ ಭುಟಿಯಾ ಫುಟ್ಬಾಲ್ ಶಾಲೆ ವಿರುದ್ಧ 5-0 ಗೋಲುಗಳ ಅಂತರದಲ್ಲಿ ಬಿಎಫ್ ಸಿ ಜಯಭೇರಿ ಬಾರಿಸಿತು. ವಿರಾಮದ ನಂತರ ಇನ್ನೂ ಮೂರು ಗೋಲುಗಳನ್ನು ಸೇರಿಸುವ ಮೊದಲು ಬಿಎಫ್ ಸಿ ಮೊದಲಾರ್ಧದಲ್ಲಿ ಎರಡು ಗೋಲುಗಳೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಿತು.
ನಿವಾಶ್ ಲಿಂಬು (12ನೇ ನಿ.), ಗಿವನ್ಸನ್ ಸುಟಿಂಗ್ (42ನೇ ನಿ.), ಸಾರಂಗ್ ಚಾರಿ (64ನೇ ನಿ.), ಅಥರ್ವ್ ರಾಣಾದೇವಿ (87ನೇ ನಿ.) ಮತ್ತು ಯುವನ್ ಎಲ್ಕೆ (90+1ನೇ ನಿ.) ಗೋಲು ಗಳಿಸಿದರು.