ಬೆಂಗಳೂರು: ರೋಗಿಗಳ ಕೊರತೆಯಿಂದ ಬಳಲುತ್ತಿರುವ ನಮ್ಮ ಕ್ಲಿನಿಕ್ ಗೆ ಜೀವ ನೀಡುವುದಕ್ಕಾಗಿ ಬಿಬಿಎಂಪಿ ಮುಂದಾಗಿದೆ.
ಮೂಲಭೂತ ಸೌಕರ್ಯಗಳ ಕೊರತೆ ಸೇರಿದಂತೆ ಹಲವಾರು ಕಾರಣಗಳಿಂದಾಗಿ ನಮ್ಮ ಕ್ಲಿನಿಕ್ ಗೆ ರೋಗಿಗಳ ಬರುತ್ತಿರುವ ಸಂಖ್ಯೆ ಕಡಿಮೆಯಾಗಿತ್ತು. ಸದ್ಯ ಇದಕ್ಕೆ ಪರಿಹಾರ ನೀಡಲು ಪಾಲಿಕೆ ಮುಂದಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 222 ನಮ್ಮ ಕ್ಲಿನಿಕ್ ಗಳು ಕೆಲಸ ಮಾಡುತ್ತವೆ. ಈಗ ಪ್ರತಿಯೊಂದು ಕ್ಲಿನಿಕ್ ನಲ್ಲೂ ಪ್ರತಿದಿನ 100 ರೋಗಿಗಳಿಗೆ ಚಿಕಿತ್ಸೆ ನೀಡುವ ಗುರಿ ಹೊಂದಲಾಗಿದೆ. ಆದರೆ, ಈಗ ಅರ್ಧದಷ್ಟು ಸಂಖ್ಯೆಯಲ್ಲಿ ರೋಗಿಗಳು ನಮ್ಮ ಕ್ಲಿನಿಕ್ ಗೆ ಬರುತ್ತಿಲ್ಲ. ಈ ನಿಟ್ಟಿನಲ್ಲಿ ನಮ್ಮ ಕ್ಲಿನಿಕ್ ಸುಧಾರಣೆಗೆ ಬಿಬಿಎಂಪಿ ಮುಂದಾಗಿದೆ.
ಪ್ರತಿ ವಾರ್ಡ್ ನಲ್ಲಿ ನಮ್ಮ ಕ್ಲಿನಿಕ್ ವೈದ್ಯರು, ಸರ್ವೇ ಮಾಡಿಸಿ ಎಷ್ಟು ಜನ ಹಿರಿಯ ನಾಗರಿಕರಿದ್ದಾರೆ? ಸಕ್ಕರೆ ಕಾಯಿಲೆ, ಬಿಪಿಯಿಂದ ಎಷ್ಟು ಜನ ಬಳಲುತ್ತಿದ್ದಾರೆ? ಎಷ್ಟು ಮಂದಿಗೆ ದೀರ್ಘಾವಧಿ ಅರೋಗ್ಯದ ಸಮಸ್ಯೆ ಇದೆ?ಎಂಬ ಅಂಕಿ ಅಂಶ ಸಂಗ್ರಹಿಸಿ ಅವರಿಗೆ ನಮ್ಮ ಕ್ಲಿನಿಕ್ ನಲ್ಲಿ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ.
ನಮ್ಮ ಕ್ಲಿನಿಕ್ ಬಗ್ಗೆ ವಾರ್ಡ್ ಗಳಲ್ಲಿ ಪ್ರಚಾರ ಮಾಡಲು ಬಿಬಿಎಂಪಿ ಮುಂದಾಗಿದೆ. ನಮ್ಮ ಕ್ಲಿನಿಕ್ ಇರುವ ಪ್ರದೇಶಧ ಸುತ್ತಮುತ್ತಲಿನ ರಸ್ತೆಗಳಲ್ಲಿ ಕ್ಲಿನಿಕ್ ವಿಳಾಸ, ಲೋಕೇಷನ್, ವೈದ್ಯರ ಪೋನ್ ನಂಬರ್ ಸೇರಿದಂತೆ ಮಾಹಿತಿ ಅಳವಡಿಸಲು ನಿರ್ಧರಿಸಲಾಗಿದೆ. ಅಗತ್ಯ ಔಷಧಿ ಸಂಗ್ರಹಿಸಲು, ಸಿಸಿ ಕ್ಯಾಮೆರಾ, ಸಿಬ್ಬಂದಿ ನೇಮಕ, ವೈದ್ಯರ ವೇತನ ಏರಿಕೆ, ಫ್ರಿಡ್ಜ್, ಟಿವಿ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತದೆ ಎಂದು ಬಿಬಿಎಂಪಿ ವಿಶೇಷ ಅಯುಕ್ತ ಸುರಲ್ಕರ್ ವಿಕಾಸ ಕಿಶೋರ್ ಮಾಹಿತಿ ನೀಡಿದ್ದಾರೆ.