ಭಾರತೀಯ ಚಿತ್ರರಂಗದಲ್ಲಿ ಬಾಲಿವುಡ್ ಬಾದ್ ಶಾ ಹೊಸದೊಂದು ದಾಖಲೆ ಬರೆಯಲು ಮುಂದಾಗಿದ್ದಾರೆ. ಕಿಂಗ್ ಖಾನ್ ತಮ್ಮ ಮುಂದಿನ ಸಿನಿಮಾ ಕಾಲ್ ಶೀಟ್ ತೆಲುಗಿನ ನಿರ್ಮಾಣ ಸಂಸ್ಥೆಗೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಹೌದು, ಶಾರುಖ್ ಖಾನ್ ಶೀಘ್ರವೇ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ನಲ್ಲಿ ನಟಿಸಲಿದ್ದಾರೆ. ಈಗಾಗಲೇ ಶಾರುಖ್ ಹಾಗೂ ಮೈತ್ರಿ ನಡುವೆ ಒಪ್ಪಂದಕ್ಕೆ ಅಂತಿಮ ಮುದ್ರೆ ಬಿದ್ದಿದ್ದು, ಸಿನಿಮಾ ಶೀಘ್ರವೇ ಸೆಟ್ಟೇರುತ್ತಿದೆ.
ಇನ್ನೂ ವಿಶೇಷವೆಂದರೆ ಈ ಸಿನಿಮಾಗೆ ಶಾರುಖ್ ತಮ್ಮ ವೃತ್ತಿ ಬದುಕಿನ ಅತಿ ದೊಡ್ಡ ಸಂಭಾವನೆ ಪಡೆಯುತ್ತಿದ್ದಾರೆ. ಮೂಲಗಳ ಪ್ರಕಾರ ಶಾರುಖ್ ಈ ಸಿನಿಮಾಗೆ 300 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ದಕ್ಷಿಣ ಭಾರತದ ಚಿತ್ರ ನಿರ್ಮಾಣ ಸಂಸ್ಥೆಯೊಂದು ಬಾಲಿವುಡ್ ನಟನಿಗೆ ಈ ಮಟ್ಟದ ಸಂಭಾವನೆ ಕೊಟ್ಟು ಸಿನಿಮಾ ಮಾಡುತ್ತಿರುವುದು ಕೂಡಾ ಇತಿಹಾಸವೇ ಸರಿ. ಹಾಗಂತಾ ಈ ಸಿನಿಮಾ ನಿರ್ದೇಶನ ಮಾಡೋರ್ಯಾರು ಅನ್ನೋದು ಕುತೂಹಲ ಮೂಡಿಸಿದೆ. ಒಂದು ಮೂಲದ ಪ್ರಕಾರ ಶಾರುಖ್ ಖಾನ್ ರನ್ನು ಸುಕುಮಾರ್ ನಿರ್ದೇಶಿಸುತ್ತಾರೆ ಎನ್ನುವ ಮಾತುಗಳಿವೆ. ಇನ್ನೊಂದೆಡೆ, ಭಾರತದ ಚಿತ್ರ ಮಾಂತ್ರಿಕ ಎಸ್ ಎಸ್ ರಾಜಮೌಳಿ ಕಿಂಗ್ ಖಾನ್ ರನ್ನು ನಿರ್ದೇಶಿಸುತ್ತಾರೆ ಅನ್ನೋದು ಕೂಡಾ ಚರ್ಚೆಯಾಗುತ್ತಿದೆ.
ಆದರೆ, ಇಲ್ಲಿಯವರೆಗೂ ನಿರ್ಮಾಣ ಸಂಸ್ಥೆ ಮಾತ್ರ ನಿರ್ದೇಶಕರ್ಯಾರು ಅನ್ನೋದನ್ನು ಬಹಿರಂಗ ಪಡಿಸಿಲ್ಲ. ಅಷ್ಟೇ ಅಲ್ಲಾ, ಸಿನಿಮಾದ ನಟಿಯಾರು, ತಂತ್ರಜ್ಞರ್ಯಾರೆಲ್ಲಾ ಅನ್ನೋದು ಕೂಡಾ ಇನ್ನಷ್ಟೇ ಬಹಿರಂಗವಾಗಬೇಕಿದೆ. ಇನ್ನು ಈ ಸಿನಿಮಾ ಭಾರತೀಯ ಚಿತ್ರರಂಗದ ಅತಿದೊಡ್ಡ ಪ್ಯಾನ್ ಇಂಡಿಯಾ ಮೂವಿ ಅನ್ನೋದು ಸ್ಪಷ್ಟವಾಗುತ್ತಿದೆ.