ಬೆಂಗಳೂರು: ಅಜೀಂ ಪ್ರೇಮ್ ಜಿ ನೇತೃತ್ವದ ಅಜೀಂ ಪ್ರೇಮ್ ಜಿ ಫೌಂಡೇಷನ್ ವತಿಯಿಂದ 2025-26ನೇ ಸಾಲಿನಲ್ಲಿ 2.5 ಲಕ್ಷ ಹೆಣ್ಣುಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲು ತೀರ್ಮಾನಿಸಲಾಗಿದೆ. ಕರ್ನಾಟಕ ಸೇರಿ ದೇಶಾದ್ಯಂತ ಇರುವ ವಿದ್ಯಾರ್ಥಿನಿಯರಿಗೆ ಸುಮಾರು 2,250 ಕೋಟಿ ರೂ. ಸ್ಕಾಲರ್ ಶಿಪ್ ನೀಡಲು ತೀರ್ಮಾನಿಸಲಾಗಿದೆ. ವಿದ್ಯಾರ್ಥಿನಿಯರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಸ್ಕಾಲರ್ ಶಿಪ್ ಪಡೆಯಬಹುದಾಗಿದೆ.
“ಅಜೀಂ ಪ್ರೇಮ್ ಜಿ ಫೌಂಡೇಷನ್ ವತಿಯಿಂದ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಮಧ್ಯಪ್ರದೇಶ, ಉತ್ತರಪ್ರದೇಶ, ರಾಜಸ್ಥಾ ನ ಮತ್ತು ಜಾರ್ಖಂಡ್ ನ 25 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಸ್ಕಾಲರ್ ಶಿಪ್ ನೀಡಲಾಗಿತ್ತು. ಈ ಬಾರಿ ಕರ್ನಾಟಕ ಸೇರಿ18 ರಾಜ್ಯಗಳಿಗೆ ವಿದ್ಯಾರ್ಥಿ ವೇತನ ಯೋಜನೆಯನ್ನು ವಿಸ್ತರಿಸಲಾಗಿದೆ. 10 ಮತ್ತು 12ನೇ ತರಗತಿ ಉತ್ತೀರ್ಣರಾಗಿ ಮುಂದಿನ ಹಂತದ ಶಿಕ್ಷಣ ಪಡೆಯುವ ಹೆಣ್ಣು ಮಕ್ಕಳಿಗೆ ಸ್ಕಾಲರ್ ಶಿಪ್ ಸಿಗಲಿದೆ” ಎಂದು ಫೌಂಡೇಷನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನುರಾಗ್ ಬೆಹರ್ ಮಾಹಿತಿ ನೀಡಿದ್ದಾರೆ.
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
“ನಗರ ಹಾಗೂ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲಾ–ಕಾಲೇಜು, ಬಿಬಿಎಂಪಿ ಸೇರಿ ಸ್ಥಳೀಯ ಸಂಸ್ಥೆಗಳು ನಡೆಸುವ ಶಾಲೆಗಳಲ್ಲಿ ಕಲಿತವರು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು. ಸರ್ಕಾರಿ, ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳು ನಡೆಸುವ ಡಿಪ್ಲೊಮಾ, ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಪ್ರತಿಭಾವಂತರಿಗೆ ಸೌಲಭ್ಯ ಸಿಗಲಿದೆ. ಉನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿರುವ ಕೆಲ ಖಾಸಗಿ ಸಂಸ್ಥೆಗಳ ವಿದ್ಯಾರ್ಥಿನಿಯರನ್ನೂ ಪರಿಗಣಿಸಲಾಗುವುದು. ವಾರ್ಷಿಕ 750 ರೂಪಾಯಿಯಂತೆ ಕೋಟಿಯಂತೆ ಮೂರು ವರ್ಷಗಳಿಗೆ 2,250 ಕೋಟಿ ರೂ. ಮೀಸಲಿಡಲಾಗಿದೆ. ಪ್ರತಿ ವಿದ್ಯಾರ್ಥಿನಿಗೂ ಅವರ ಕೋರ್ಸ್ ಮುಗಿಯುವವರೆಗೂ ಪ್ರತಿ ವರ್ಷ 30 ಸಾವಿರ ರೂ. ನೀಡಲಾಗುವುದು. ಈ ಹಣವನ್ನು ನೇರವಾಗಿ ವಿದ್ಯಾರ್ಥಿನಿಯರ ಖಾತೆಗೆ ಜಮೆ ಮಾಡಲಾಗುವುದು” ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ ನಲ್ಲಿ ಅರ್ಜಿ ಸಲ್ಲಿಕೆ ಆರಂಭ
“ಇದೇ ವರ್ಷದ ಸೆಪ್ಟೆಂಬರ್ ನಲ್ಲಿ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಡಿಪ್ಲೊಮಾ, ಎಂಜನಿಯರಿಂಗ್ ಸೇರಿ ವಿವಿಧ ಪದವಿ ಕೋರ್ಸ್ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿನಿಯರು ಸೆಪ್ಟೆಂಬರ್ 1ರಿಂದ ಅರ್ಜಿ ಸಲ್ಲಿಸಬಹುದು. ಅಜೀಂ ಪ್ರೇಮ್ ಜಿ ಫೌಂಡೇಷನ್ ನ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಕೆಯ ಲಿಂಕ್ ಬಿಡುಗಡೆ ಮಾಡಲಾಗುತ್ತದೆ. ಅದರ ಮೂಲಕ ಅರ್ಜಿ ಸಲ್ಲಿಸಬಹುದು” ಎಂದು ಮಾಹಿತಿ ನೀಡಿದ್ದಾರೆ.