ಬೈಕ್ ಟ್ಯಾಕ್ಸಿ ಸೇವೆ ಹಿಂದಕ್ಕೆ ಪಡೆಯುತ್ತಿದ್ದಂತೆ ಆಟೋ ದರ ಏರಿಕೆ ಮಾಡಿ, ಪ್ರಯಾಣಿಕರಿಂದ ಸುಲಿಗೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.
ಕೆಲವೊಂದು ಕಡೆ ಹತ್ತರಿಂದ ಎಪ್ಪತ್ತು ರೂಪಾಯಿವರೆಗೂ ಆಟೋ ದರ ಏರಿಕೆ ಮಾಡಿ ವಸೂಲಿ ಮಾಡಲಾಗುತ್ತಿದೆ. ಆಟೋ ದರಕ್ಕೆ ಯಾವುದೇ ಲಂಗುಲಗಾಮಿಲ್ಲದೇ ಬಾಯಿಗೆ ಬಂದಂತೆ ಏರಿಕೆ ಮಾಡಿ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಆದೇಶವೊಂದನ್ನು ಹೊರಡಿಸಿದೆ.
ಸಾಮಾನ್ಯವಾಗಿ ಕೋರಮಂಗಲದಿಂದ ಲಾಂಫೋರ್ಡ್ ರಸ್ತೆಗೆ ಮೀಟರ್ ದರ 140 ರೂ. ನಿಂದ 150 ರೂ. ಇದೆ. ಆದರೆ, ಉಬರ್ ನಲ್ಲಿ 190 -200 ರೂ. ತೋರಿಸುತ್ತಿದೆ. ನಮ್ಮ ಯಾತ್ರಿ ಮತ್ತು ರ‍್ಯಾಪಿಡೋದಲ್ಲೂ ಇದೇ ರೀತಿಯ ಸಮಸ್ಯೆ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ಸಾರಿಗೆ ಸಚಿವರು ಖಡಕ್ ವಾರ್ನಿಂಗ್ ನೀಡಿದ್ದಾರೆ. ಅಪ್ ಆಧಾರಿತ ಅಥವಾ ಇನ್ನಿತರ ಆಟೋ ಚಾಲಕರು ದರ ಏರಿಸಿ, ಗ್ರಾಹಕರನ್ನು ಸುಲಿಯುವುವುದು ಕಂಡು ಬಂದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆದೇಶ ಹೊರಡಿಸಿದ್ದಾರೆ. ಜನರ ಬೇಡಿಕೆಯ ಮೇಲೆ ಆಪ್ ಆಧಾರಿತ ಸೇವೆ ನೀಡುವ ಈ ಸಂಸ್ಥೆಗಳು ದರವನ್ನು ಹೆಚ್ಚಿಸುತ್ತಿವೆ. ಮಧ್ಯಾಹ್ನದ ಹೊತ್ತಿಗೆ ಹಿಂದಿನ ಬೆಲೆಯೇ ಇರುತ್ತದೆ. ಬೆಳಗ್ಗೆ ಮತ್ತು ಸಾಯಂಕಾಲ ಡಿಮಾಂಡ್ ನೋಡಿ, ದರವನ್ನು ಏರಿಸಲಾಗುತ್ತದೆ. ದರ ಏರಿಕೆ ಬಗ್ಗೆ ಕಂಪ್ಲೇಂಟ್ ಬಂದರೆ ಕೂಡಲೇ ಕ್ರಮ ಕೈಗಳ್ಳಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.