ಬೆಂಗಳೂರು: ಹೊಸ ಹಣಕಾಸು ವರ್ಷಕ್ಕೆ ಕಾಲಿಟ್ಟಿದ್ದೇವೆ. ಷೇರು ಮಾರುಕಟ್ಟೆ ಕೂಡ ಅತಂತ್ರದ ಮಧ್ಯೆಯೂ ಭರವಸೆ ಮೂಡಿಸುತ್ತಿದೆ. ಇದರ ಮಧ್ಯೆಯೇ, ಮೇ 1ರಿಂದ ಹಲವು ಹಣಕಾಸು ನಿಯಮಗಳಲ್ಲಿ ಬದಲಾವಣೆಯಾಗಲಿವೆ. ಅದರಲ್ಲೂ ಎಟಿಎಂಗಳಲ್ಲಿ ಹಣ ವಿತ್ ಡ್ರಾ ಮಾಡಲು ಹೆಚ್ಚುವರಿ ಶುಲ್ಕ ವಿಧಿಸುವ ನಿಯಮವು ಮೇ 1ರಿಂದಲೇ ಜಾರಿಗೆ ಬರಲಿದೆ. ಇದು ಗ್ರಾಹಕರಿಗೆ ಹೊರೆಯಾಗುತ್ತದೆ. ಮೇ 1ರಿಂದ ಯಾವೆಲ್ಲ ಹಣಕಾಸು ನಿಯಮಗಳು ಬದಲಾಗಲಿವೆ ಎಂಬುದರ ಮಾಹಿತಿ ಇಲ್ಲಿದೆ.
ಎಟಿಎಂ ವಿತ್ ಡ್ರಾ ಶುಲ್ಕ ಹೆಚ್ಚಳ
ಎಟಿಎಂ ಇಂಟರ್ ಚೇಂಜ್ ಶುಲ್ಕ ಹೆಚ್ಚಿಸಲು ಆರ್ ಬಿಐ ಅನುಮೋದನೆ ನೀಡಿದ ಕಾರಣ ಎಟಿಎಂಗಳಲ್ಲಿ ಗ್ರಾಹಕರು ಹಣ ವಿತ್ ಡ್ರಾ ಮಾಡಿದರೆ ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ತಿಂಗಳಿಗೆ ಐದು ಬಾರಿ ಉಚಿತವಾಗಿ ಹಣ ವಿತ್ ಡ್ರಾ ಮಾಡುವ ಮಿತಿಯನ್ನು ಮೀರಿದರೆ ಪ್ರತಿ ವಿತ್ ಡ್ರಾಗೆ 23 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ. ಇದಕ್ಕೂ ಮೊದಲು 21 ರೂಪಾಯಿ ಶುಲ್ಕ ಇತ್ತು. ಹಾಗಾಗಿ, ಗ್ರಾಹಕರು ತಿಂಗಳಿಗೆ ಐದಕ್ಕಿಂತ ಹೆಚ್ಚು ಸಲ ಎಟಿಎಂಗಳ ಮೂಲಕ ಹಣ ವಿತ್ ಡ್ರಾ ಮಾಡುವುದನ್ನು ತಪ್ಪಿಸಬೇಕಿದೆ.
ಆರ್ ಬಿಎಲ್ ಬಡ್ಡಿ ಜಮೆ ನಿಯಮ ಬದಲು
ರತ್ನಾಕರ ಬ್ಯಾಂಕ್ ಲಿಮಿಟೆಡ್ (ಆರ್ ಬಿ ಎಲ್)ನಲ್ಲಿ ಉಳಿತಾಯ ಖಾತೆ ಹೊಂದಿದವರಿಗೆ ಮೂರು ತಿಂಗಳಿಗೆ ಒಮ್ಮೆ ಜಮೆಯಾಗುತ್ತಿದ್ದ ಬಡ್ಡಿಯು ಇನ್ನುಮುಂದೆ ತಿಂಗಳಿಗೊಮ್ಮೆ ಜಮೆಯಾಗಲಿದೆ. ಗ್ರಾಹಕರು ಇರಿಸುವ ಠೇವಣಿಯ ಮೊತ್ತದ ಆಧಾರದ ಮೇಲೆ ಶೇ.7ರವರೆಗೆ ಬಡ್ಡಿಯನ್ನು ನೀಡಲಾಗುತ್ತದೆ.
ಎಫ್ ಡಿ ಬಡ್ಡಿ ಪರಿಷ್ಕರಣೆ
ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಕಂಪನಿಯು ನಿಶ್ಚಿತ ಠೇವಣಿ ಮೇಲಿನ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. 60 ವರ್ಷ ದಾಟಿದವರು ಇರಿಸುವ ಎಫ್ ಡಿಗೆ ವರ್ಷಕ್ಕೆ ಹೆಚ್ಚುವರಿಯಾಗಿ 0.50ರಷ್ಟು ಬಡ್ಡಿದರ ನೀಡಲಾಗುತ್ತದೆ. ಇನ್ನು, ಮಹಿಳಾ ಠೇವಣಿದಾರರಿಗೆ ಹೆಚ್ಚುವರಿಯಾಗಿ ಶೇ.0.10ರಷ್ಟು ಬಡ್ಡಿ ನೀಡಲಾಗುತ್ತದೆ.