ಟೆಹ್ರಾನ್: ಇರಾನ್ ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿಯಾದ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್ಕಾಸ್ಟಿಂಗ್ (IRIB) ಕೇಂದ್ರಕ್ಕೆ ಸೋಮವಾರ ಇಸ್ರೇಲ್ ಸೇನೆ ಬಾಂಬ್ ಹಾಕಿದೆ. ಇದರಿಂದ ಮಾಧ್ಯಮ ಕಚೇರಿಯ ಕಟ್ಟಡಕ್ಕೆ ತೀವ್ರ ಹಾನಿಯಾಗಿದೆ. ಈ ದಾಳಿಯು ನೇರ ಪ್ರಸಾರದ ಸಮಯದಲ್ಲೇ ನಡೆದಿದ್ದು, ಸ್ಟುಡಿಯೊದಲ್ಲಿ ಪೂರ್ತಿ ಧೂಳು ಆವರಿಸಿದ್ದು ಕಾಣಿಸುತ್ತದೆ. ದಾಳಿಯ ವೇಳೆ ಸುದ್ದಿವಾಚಕಿಯೊಬ್ಬರು ಸುದ್ದಿ ಓದುತ್ತಿದ್ದರು. ಲೈವ್ ಪ್ರಸಾರದ ಸಮಯದಲ್ಲೇ ಕಟ್ಟಡಕ್ಕೆ ಬಾಂಬ್ ಬಿದ್ದಿದ್ದು, ಸುದ್ದಿವಾಚಕಿಯು ಸ್ಟುಡಿಯೊದಿಂದ ಓಡಿಹೋಗುವ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಸ್ರೇಲ್ನ ಸೇನೆಯು ಈ ದಾಳಿಯನ್ನು ದೃಢೀಕರಿಸಿದ್ದು, IRIB ಕೇಂದ್ರವನ್ನು ಇರಾನ್ನ ಸೇನೆಯು “ಸೇನಾ ಕಾರ್ಯಾಚರಣೆಗೆ ಬಳಸಿಕೊಳ್ಳುತ್ತಿತ್ತು” ಎಂದು ಆರೋಪಿಸಿದೆ. ದಾಳಿಗೆ ಮೊದಲು ಟೆಹ್ರಾನ್ನ ಕೇಂದ್ರ ಭಾಗದಲ್ಲಿ ಸುಮಾರು 3,30,000 ಜನರಿಗೆ ಆ ಸ್ಥಳವನ್ನು ಕೂಡಲೇ ಖಾಲಿ ಮಾಡುವಂತೆ ಇಸ್ರೇಲ್ ಎಚ್ಚರಿಕೆ ನೀಡಿತ್ತು. ಈ ಎಚ್ಚರಿಕೆಯು ಸರ್ಕಾರಿ ಟಿವಿ ಕೇಂದ್ರ, ರಾಷ್ಟ್ರೀಯ ಪೊಲೀಸ್ ಕೇಂದ್ರ ಮತ್ತು ರೆವೊಲ್ಯೂಷನರಿ ಗಾರ್ಡ್ ನಡೆಸುವ ಆಸ್ಪತ್ರೆ ಸೇರಿದಂತೆ ಇತರ ಪ್ರಮುಖ ಸ್ಥಳಗಳನ್ನು ಒಳಗೊಂಡಿತ್ತು.
ಈ ದಾಳಿಯಿಂದ IRIB ಕಟ್ಟಡದಲ್ಲಿ ದೊಡ್ಡ ಪ್ರಮಾಣದ ಕಪ್ಪು ಹೊಗೆ ಆವರಿಸಿದ್ದು, ಕೆಲವು ಉದ್ಯೋಗಿಗಳು ಗಾಯಗೊಂಡಿದ್ದಾರೆ ಎಂದು ಇರಾನ್ನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಇರಾನ್ನ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಕಾಯಿ ಈ ದಾಳಿಯನ್ನು ಖಂಡಿಸಿದ್ದು, ಇದನ್ನು “ಮಾಧ್ಯಮದ ಮೇಲಿನ ದಾಳಿ” ಎಂದು ಕರೆದು ಅಂತರರಾಷ್ಟ್ರೀಯ ಸಮುದಾಯವು ಇಸ್ರೇಲ್ನಿಂದ ನ್ಯಾಯ ಕೋರಬೇಕೆಂದು ಒತ್ತಾಯಿಸಿದ್ದಾರೆ.
ಇನ್ನೊಂದೆಡೆ, ಚಾನೆಲ್ ವರದಿಗಾರರೊಬ್ಬರು ಹೊತ್ತಿ ಉರಿಯುತ್ತಿರುವ ಕಚೇರಿ ಕಟ್ಟಡದ ಮುಂಭಾಗದಲ್ಲೇ ನಿಂತು ವರದಿ ಮಾಡುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ. ಬಾಂಬ್ ಬಂದು ಬಿದ್ದಾಗ ನಾನು ಕಚೇರಿದ ಮೊದಲ ಮಹಡಿಯಲ್ಲಿದ್ದೆ. ನನ್ನ ಎಷ್ಟು ಸಹೋದ್ಯೋಗಿಗಳು ಮೃತಪಟ್ಟರು ಎಂಬುದು ನನಗೆ ಗೊತ್ತಿಲ್ಲ. ಎಷ್ಟು ಮಂದಿ ಗಾಯಗೊಂಡಿದ್ದಾರೆಂದೂ ಗೊತ್ತಿಲ್ಲ. ಆದರೆ ನಾವು ಭಯಭೀತರಾಗಿಲ್ಲ. ನಾವು ಎಲ್ಲಿಗೂ ಓಡಿ ಹೋಗಲ್ಲ. ನಮ್ಮ ಕರ್ತವ್ಯವನ್ನು ನಿಭಾಯಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಎರಡೂ ದೇಶಗಳ ನಡುವಿನ ಘರ್ಷಣೆಯಿಂದ ಇರಾನ್ನಲ್ಲಿ 200ಕ್ಕೂ ಹೆಚ್ಚು ಮತ್ತು ಇಸ್ರೇಲ್ನಲ್ಲಿ 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ದಾಳಿಗಳು ಮುಂದುವರಿದಂತೆ, ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಕ್ಚಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಒತ್ತಡ ಹೇರಿ ಇಸ್ರೇಲ್ನ ದಾಳಿಗಳನ್ನು ನಿಲ್ಲಿಸುವಂತೆ ಕತಾರ್, ಸೌದಿ ಅರೇಬಿಯಾ ಮತ್ತು ಒಮಾನ್ಗೆ ಕೋರಿಕೆ ಸಲ್ಲಿಸಿದ್ದಾರೆ.
ಈ ಘಟನೆಯು ಇಸ್ರೇಲ್ ಮತ್ತು ಇರಾನ್ ನಡುವಿನ ದೀರ್ಘಕಾಲದ ಶತ್ರುತ್ವವನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಪ್ರಾದೇಶಿಕ ಯುದ್ಧದ ಭೀತಿಯನ್ನು ಹೆಚ್ಚಿಸಿದೆ.