ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು “ಆಪರೇಷನ್ ಸಿಂದೂರ”( Operation Sindoor) ಹೆಸರಲ್ಲಿ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ನಿಖರ ದಾಳಿಯಲ್ಲಿ ಸುಮಾರು 100 ಮಂದಿ ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸರ್ವಪಕ್ಷ ಸಭೆಗೆ ಮಾಹಿತಿ ನೀಡಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ಗುರಿಯಾಗಿಸಿಕೊಂಡು ಮಂಗಳವಾರ ತಡರಾತ್ರಿ ಸೇನಾ ಕಾರ್ಯಾಚರಣೆ ನಡೆಸಿದ ಬೆನ್ನಲ್ಲೇ ಕೇಂದ್ರ ಸರ್ಕಾರವು ಇಂದು ಬೆಳಗ್ಗೆ 11 ಗಂಟೆಗೆ ಸರ್ವಪಕ್ಷ ಸಭೆ ಕರೆದಿತ್ತು. ಸಭೆಯಲ್ಲಿ ದಾಳಿಯ ಕುರಿತು ಸಚಿವ ರಾಜನಾಥ್ ಸಿಂಗ್ ವಿವರಣೆ ನೀಡಿದ್ದು, “ಭಾರತದ ನಿಖರ ದಾಳಿಯಲ್ಲಿ 100ರಷ್ಟು ಉಗ್ರರನ್ನು ನಿರ್ಮೂಲನೆ ಮಾಡಲಾಗಿದೆ” ಎಂದಿದ್ದಾರೆ. ಅಲ್ಲದೇ, ನಮ್ಮ ಪ್ರತೀಕಾರದ ದಾಳಿಗೆ ಪ್ರತಿಯಾಗಿ ಪಾಕಿಸ್ತಾನವೇನಾದರೂ ದುಸ್ಸಾಹಸಕ್ಕೆ ಮುಂದಾದರೆ ಭಾರತ ಹಿಂದೆ ಸರಿಯುವುದಿಲ್ಲ ಎಂದೂ ಸ್ಪಷ್ಟಪಡಿಸಿದರು.
“ಆಪರೇಷನ್ ಸಿಂದೂರದಲ್ಲಿ 9 ಭಯೋತ್ಪಾದಕ ಅಡಗುತಾಣಗಳ ಮೇಲೆ ನಿಖರವಾದ ದಾಳಿ ನಡೆಸಲಾಗಿದೆ. ದಾಳಿಯ ಮೂಲಕ ಸುಮಾರು 100 ಭಯೋತ್ಪಾದಕರನ್ನು ಕೊಲ್ಲಲಾಗಿದೆ. ಸಾವಿನ ಸಂಖ್ಯೆಯ ಬಗ್ಗೆ ಸ್ಪಷ್ಟ ಮಾಹಿತಿಗಾಗಿ ಕಾಯುತ್ತಿದ್ದೇವೆ ಮತ್ತು ಎಣಿಕೆ ನಡೆಯುತ್ತಿದೆ” ಎಂದೂ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆಗೆ ಮಾಹಿತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
ನಾವು ಪರಿಸ್ಥಿತಿಯನ್ನು ಉಲ್ಬಣಗೊಳಿಸಲು ಬಯಸುವುದಿಲ್ಲ. ಆದರೆ ಪಾಕಿಸ್ತಾನವೇನಾದರೂ ದುಷ್ಕೃತ್ಯಕ್ಕೆ ಮುಂದಾದರೆ ನಾವು ಹಿಂದೆ ಸರಿಯುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ ಎಂದೂ ಮೂಲಗಳು ತಿಳಿಸಿವೆ.
ಒಗ್ಗಟ್ಟಾಗಿ ನಿಲ್ಲುವಂತೆ ಮೋದಿ ಕರೆ
‘ಆಪರೇಷನ್ ಸಿಂದೂರ’ ಕುರಿತು ವಿವಿಧ ರಾಜಕೀಯ ಪಕ್ಷಗಳಿಗೆ ವಿವರಣೆ ನೀಡುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು, ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲೋಣ ಎಂದು ಪ್ರತಿಪಕ್ಷಗಳಿಗೆ ಒತ್ತಾಯಿಸಿದರು ಎಂದು ಹೇಳಲಾಗಿದೆ. “ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬ ಭಾರತೀಯ ನಾಗರಿಕನೂ ಒಗ್ಗಟ್ಟಿನಿಂದ ನಿಲ್ಲಬೇಕು” ಎಂದು ಮೋದಿ ಸಂದೇಶ ನೀಡಿದ್ದಾರೆ. ಇದು ಸೇನಾ ಕಾರ್ಯಾಚರಣೆಯ ಬಳಿಕ ಮೋದಿ ನೀಡಿರುವ ಮೊದಲ ಸಂದೇಶವಾಗಿದೆ ಎಂದೂ ಮೂಲಗಳು ಹೇಳಿವೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್.ಜೈಶಂಕರ್, ಸಚಿವರಾದ ಜೆ.ಪಿ.ನಡ್ಡಾ ಮತ್ತು ನಿರ್ಮಲಾ ಸೀತಾರಾಮನ್ ಭಾಗವಹಿಸಿದ್ದರು. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ, ತೃಣಮೂಲ ಕಾಂಗ್ರೆಸ್‌ನ ಸಂದೀಪ್ ಬಂಡೋಪಾಧ್ಯಾಯ, ಡಿಎಂಕೆಯ ಟಿಆರ್ ಬಾಲು ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಇವರಲ್ಲದೇ ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್, ಎಎಪಿ ನಾಯಕ ಸಂಜಯ್ ಸಿಂಗ್, ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್, ಎನ್ಸಿಪಿ (ಎಸ್ಪಿ) ನಾಯಕಿ ಸುಪ್ರಿಯಾ ಸುಳೆ, ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ ಮತ್ತು ಬಿಜೆಡಿಯ ಸಸ್ಮಿತ್ ಪಾತ್ರಾ ಕೂಡ ಇದ್ದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, “ನಾವು ಸರ್ಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲವನ್ನು ನೀಡಿದ್ದೇವೆ” ಎಂದು ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಜೈಶ್-ಎ-ಮೊಹಮ್ಮದ್ (ಜೆಎಂ) ಮತ್ತು ಲಷ್ಕರ್-ಎ-ತೈಬಾ (ಎಲ್ಇಟಿ) ಗೆ ಸಂಬಂಧಿಸಿದ 9 ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸುವ ಮೂಲಕ ದಿಟ್ಟತನ ಮೆರೆದಿರುವ ಸಶಸ್ತ್ರ ಪಡೆಗಳನ್ನು ಪ್ರತಿಪಕ್ಷಗಳು ಶ್ಲಾಘಿಸಿವೆ.