ಇತ್ತೀಚೆಗೆ ಸಿನಿಮಾ ಸೀರಿಯಲ್ ನಟ ನಟಿಯರು ದಂಪತಿ ಜೀವನಕ್ಕೆ ಕಾಲಿಡುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಇದೀಗ ಡಿಯರ್ ಸತ್ಯʼ ಮತ್ತು ʻಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ ಸೇರಿದಂತೆ ಮುಂತಾದ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ಅರ್ಚನಾ ಕೊಟ್ಟಿಗೆ ಸ್ಟಾರ್ ಕ್ರಿಕೆಟರ್ ಶರತ್ ಬಿಆರ್ ಅವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಎಂಟು ವರ್ಷಗಳ ಪ್ರೀತಿಗೆ ಮದುವೆ ಮುದ್ರೆ ಒತ್ತಲು ಸಜ್ಜಾಗಿದ್ದಾರೆ.
ಹಲವು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿರುವ ನಟಿ ಅರ್ಚನಾ ಕೊಟ್ಟಿಗೆ ಸದ್ದಿಲ್ಲದೇ ಕ್ರಿಕೆಟಿಗನ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಸದ್ಯ ಇವರ ನಿಶ್ಚಿತಾರ್ಥದ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಅರ್ಚನಾ ಅವರ ಭಾವಿ ಪತಿ ಶರತ್ ಬಿಆರ್, ಕರ್ನಾಟಕ ಕ್ರಿಕೆಟ್ ತಂಡದ ಪ್ರಮುಖ ಆಟಗಾರ. ಬ್ಯಾಟ್ಸ್‌ಮನ್, ವಿಕೆಟ್ ಕೀಪರ್ ಆಗಿ ಶರತ್ ಅವರು ಗುರುತಿಸಿಕೊಂಡಿದ್ದಾರೆ. ಇನ್ನೂ ಕಳೆದ ವರ್ಷ ಗುಜರಾತ್ ಟೈಟನ್ಸ್ ತಂಡದ ಆಟಗಾರ ಕೂಡ ಆಗಿದ್ದರು.
ಕರ್ನಾಟಕ ರಾಜ್ಯ ಸಂಸ್ಥೆ ಶರತ್ ಅವರ ಪ್ರತಿಭೆಯನ್ನು ಗುರುತಿಸಿ 2015ರಲ್ಲಿ ಡರ್ಹ್ಯಾಮ್ ಕೌಂಟಿ ಕ್ರಿಕೆಟ್ ಕ್ಲಬ್ ನಲ್ಲಿ ತರಬೇತಿಗೆ ಕಳುಹಿಸಲು ನಿರ್ಧರಿಸಿತು. ಶರತ್ ಅವರು 2018ರಲ್ಲಿ ಕೋಲ್ಕತ್ತಾದಲ್ಲಿ ಜಾರ್ಖಂಡ್ ವಿರುದ್ಧ ಕರ್ನಾಟಕ ಪರ ಟ್ವೆಂಟಿ20 ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಶರತ್ ಬಲಗೈ ಬ್ಯಾಟ್ಸ್‌ಮನ್ ಆಗಿದ್ದು, ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ.
ಮೂಲಗಳ ಪ್ರಕಾರ, ಅರ್ಚನಾ ಕೊಟ್ಟಿಗೆ ಮತ್ತು ಶರತ್ ಇಬ್ಬರು ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಅರ್ಚನಾಗೆ ಶರತ್ ಕಾಲೇಜಿನಿಲ್ಲಿ ಸೀನಿಯರ್ ಆಗಿದ್ದರು. 2018ರಲ್ಲಿ, ಸ್ನೇಹಿತನ ಮೂಲಕ ಭೇಟಿಯಾದ ಈ ಜೋಡಿಗೆ ಮೊದಲ ಭೇಟಿಯಲ್ಲಿ ಪ್ರೀತಿ ಹುಟ್ಟಿತ್ತು. ಅದಾದ ಬಳಿಕ ಇಬ್ಬರೂ ಕೂಡ ಪ್ರೀತಿಯಲ್ಲಿ ಬಿದ್ದಿದ್ದರು. ಇದೀಗ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.