ಬೆಂಗಳೂರು: ರಾಜ್ಯದ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ ಎದುರಾಗಿದೆ.
ಇತ್ತೀಚೆಗಷ್ಟೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿಕೆಯಾಗಿದ್ದವು. ಈಗ ಇದರ ಖಾಸಗಿ ಬಸ್ ಗಳ ದರ ಏರಿಕೆ ಫಿಕ್ಸ್ ಎನ್ನಲಾಗಿದೆ. ಟೂರ್ಸ್ ಆ್ಯಂಡ್ ಟ್ರಾವೆಲ್ಸ್, ಕ್ಯಾಬ್ ಬಾಡಿಗೆ ದರ ಏರಿಕೆಯಾದ ಬೆನ್ನಲ್ಲೇ ಇದೀಗ ಖಾಸಗಿ ಬಸ್ ದರ ಏರಿಸಲು ಖಾಸಗಿ ಬಸ್ ಗಳ ಒಕ್ಕೂಟ ನಿರ್ಧರಿಸಿದೆ.
ಇದೇ ತಿಂಗಳು 15ರ ನಂತರ ಖಾಸಗಿ ಬಸ್ ಗಳ ದರ ಏರಿಕೆಯಾಗುವ ಸಾಧ್ಯತೆ ಇದೆ. ಶೇ.15 ರಿಂದ ಶೇ. 20ರ ವರೆಗೆ ಏರಿಕೆಗೆ ನಿರ್ಧರಿಸಲಾಗಿದೆ ಎನ್ನಲಾಗಿದೆ. ಅಲ್ಲದೇ, ಈಗಾಗಲೇ ಸರ್ಕಾರಕ್ಕೆ ಖಾಸಗಿ ಬಸ್ ಮಾಲೀಕರ ಸಂಘಟನೆ ಡೆಡ್ಲೈನ್ ನೀಡಿದೆ. ಡೀಸೆಲ್, ಟೋಲ್, ಫಿಟ್ನೆಸ್ ಸರ್ಟಿಫಿಕೇಟ್ ದರ ಹೆಚ್ಚಳ ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಸಬೇಕೆಂದು ಒತ್ತಾಯಿಸಿದೆ. ಈಗಾಗಲೇ ಏಪ್ರಿಲ್ 15 ರಂದು ಲಾರಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಈ ಮುಷ್ಕರಕ್ಕೆ ಖಾಸಗಿ ಬಸ್ ಮಾಲೀಕರಿಂದಲೂ ಬೆಂಬಲ ಸಿಕ್ಕಿದೆ. ಸರ್ಕಾರ ಏ. 14ರ ಒಳಗೆ ಡೀಸೆಲ್ ದರ ಕಡಿಮೆ ಮಾಡಬೇಕು. ಇಲ್ಲವಾದರೆ ಏ. 15ರ ನಂತರ ಬೆಲೆ ಏರಿಕೆ ಮಾಡಲಾಗುವುದು ಎಂದು ಖಾಸಗಿ ಬಸ್ ಅಸೋಸಿಯೇಷನ್ ಅಧ್ಯಕ್ಷ ನಟರಾಜ್ ಶರ್ಮಾ ಹೇಳಿದ್ದಾರೆ.