ಬೆಂಗಳೂರು: ಭಾರತದ ಹಾಸ್ಪಿಟಾಲಿಟಿ ಕ್ಷೇತ್ರವನ್ನು ಸಂಪೂರ್ಣವಾಗಿ ಪರಿವರ್ತಿಸುವ ದೃಷ್ಟಿಯೊಂದಿಗೆ, ಜಾಗತಿಕ ಹಾಸ್ಪಿಟಾಲಿಟಿ ದಿಗ್ಗಜ ಅಕ್ಕೋರ್ ಮತ್ತು ಭಾರತದ ಪ್ರಮುಖ ಟ್ರಾವೆಲ್ ಕಾಂಗ್ಲೊಮರೇಟ್ ಇಂಟರ್ಗ್ಲೋಬ್ ಮಹತ್ವದ ಸಹಭಾಗಿತ್ವಕ್ಕೆ ಕೈ ಜೋಡಿಸಿವೆ. ಈ ಒಕ್ಕೂಟವು ಭಾರತದಲ್ಲಿ ಶೀಘ್ರವಾಗಿ ಬೆಳೆಯುವ ಹಾಸ್ಪಿಟಾಲಿಟಿ ಸಂಸ್ಥೆಯನ್ನು ರಚಿಸುವ ಗುರಿಯನ್ನು ಹೊಂದಿದ್ದು, 2030ರ ವೇಳೆಗೆ ಅಕ್ಕೋರ್ ಬ್ರ್ಯಾಂಡ್ಗಳಡಿ 300 ಹೋಟೆಲ್ಗಳನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡಿದೆ.
ಈ ಸಹಭಾಗಿತ್ವದ ಭಾಗವಾಗಿ, ಭಾರತದ ಪ್ರಮುಖ ಬಜೆಟ್ ಬ್ರ್ಯಾಂಡಡ್ ಹೋಟೆಲ್ ವೇದಿಕೆಯಾದ ಟ್ರೀಬೋದೊಂದಿಗೆ ವಿಶೇಷ ಒಪ್ಪಂದ ಮಾಡಿಕೊಳ್ಳಲಾಗಿದೆ. 120 ನಗರಗಳಲ್ಲಿ 800ಕ್ಕೂ ಹೆಚ್ಚು ಹೋಟೆಲ್ಗಳನ್ನು ತನ್ನ ತಂತ್ರಜ್ಞಾನ-ಆಧಾರಿತ ಕಾರ್ಯತಂತ್ರದ ಮೂಲಕ ನಿರ್ವಹಿಸುತ್ತಿರುವ ಟ್ರೀಬೋದಲ್ಲಿ ಅಕ್ಕೋರ್ ಮತ್ತು ಇಂಟರ್ಗ್ಲೋಬ್ ಜಂಟಿಯಾಗಿ ದೊಡ್ಡ ಪ್ರಮಾಣದ ಹೂಡಿಕೆ ಮಾಡಿದ್ದು, ಅದರ ಪ್ರಮುಖ ಷೇರುದಾರರಾಗಿದ್ದಾರೆ. ಈ ಒಪ್ಪಂದದಡಿ, ಟ್ರೀಬೋ ಭಾರತದಲ್ಲಿ ಐಬಿಸ್ ಮತ್ತು ಮರ್ಕ್ಯೂರ್ ಬ್ರ್ಯಾಂಡ್ಗಳ ವಿಸ್ತರಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಈಗಾಗಲೇ ಹತ್ತು ಹೊಸ ಮರ್ಕ್ಯೂರ್ ಹೋಟೆಲ್ಗಳಿಗಾಗಿ ಆಸ್ತಿ ಮಾಲೀಕರೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿರುವ ಟ್ರೀಬೋ, ಈ ಬ್ರ್ಯಾಂಡ್ನ ಬೆಳವಣಿಗೆಗೆ ದೊಡ್ಡ ಹೆಜ್ಜೆ ಇಟ್ಟಿದೆ.
ಅಕ್ಕೋರ್ನ ಬ್ರ್ಯಾಂಡ್ಗಳು ಟ್ರೀಬೋನ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತದ ಅನೌಪಚಾರಿಕ (ಅನ್ಬ್ರ್ಯಾಂಡಡ್) ಹೋಟೆಲ್ ಮಾರುಕಟ್ಟೆಯನ್ನು ಗುರಿಯಾಗಿಟ್ಟುಕೊಂಡು ವೇಗವಾಗಿ ಬೆಳೆಯಲು ಯೋಜಿಸಿವೆ. ಈ ಸಹಯೋಗದ ಫಲವಾಗಿ, ಅಕ್ಕೋರ್ ಮತ್ತು ಟ್ರೀಬೋ ಒಟ್ಟಿಗೆ 30,000ಕ್ಕೂ ಹೆಚ್ಚು ಕೊಠಡಿಗಳೊಂದಿಗೆ ಭಾರತದ ಮೂರನೇ ಅತಿದೊಡ್ಡ ಹಾಸ್ಪಿಟಾಲಿಟಿ ನೆಟ್ವರ್ಕ್ ಆಗಿ ರೂಪುಗೊಳ್ಳಲಿವೆ.
ಅಕ್ಕೋರ್ನ ಅಧ್ಯಕ್ಷ ಮತ್ತು ಸಿಇಒ ಸೆಬಾಸ್ಟಿಯನ್ ಬಝಿನ್ ಈ ಕುರಿತು ಮಾತನಾಡಿ, “ಈ ಸಹಭಾಗಿತ್ವವು ಭಾರತದಲ್ಲಿ ನಮ್ಮ ಬ್ರ್ಯಾಂಡ್ಗಳಿಗೆ ಒಂದು ಐತಿಹಾಸಿಕ ಕ್ಷಣವಾಗಿದೆ. ಇಂಟರ್ಗ್ಲೋಬ್ನೊಂದಿಗಿನ ದೀರ್ಘಕಾಲೀನ ವಿಶ್ವಾಸದ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಮೂಲಕ, ಹಾಸ್ಪಿಟಾಲಿಟಿ, ತಂತ್ರಜ್ಞಾನ ಮತ್ತು ಉದ್ಯಮಶೀಲತೆಯ ಸಮ್ಮಿಲನದೊಂದಿಗೆ ವಿಶ್ವದ ಅತ್ಯಂತ ರೋಮಾಂಚಕ ಪ್ರವಾಸಿ ಮಾರುಕಟ್ಟೆಗಳಲ್ಲಿ ಒಂದಾದ ಭಾರತದಲ್ಲಿ ಅಪಾರ ಬೆಳವಣಿಗೆಯ ಸಾಧ್ಯತೆಯನ್ನು ತೆರೆದಿಡುತ್ತಿದ್ದೇವೆ,” ಎಂದರು.
ಇಂಟರ್ಗ್ಲೋಬ್ ಎಂಟರ್ಪ್ರೈಸಸ್ನ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ರಾಹುಲ್ ಭಾಟಿಯಾ , “ಅಕ್ಕೋರ್ನೊಂದಿಗಿನ ಈ ಹೊಸ ಸಹಭಾಗಿತ್ವವು ನಮ್ಮ ಎರಡು ದಶಕಗಳ ಸುದೀರ್ಘ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಇಂಟರ್ಗ್ಲೋಬ್ನ ಆಳವಾದ ಮಾರುಕಟ್ಟೆ ಒಳನೋಟಗಳು, ಅಕ್ಕೋರ್ನ ಜಾಗತಿಕ ಮಟ್ಟದ ಸೇವೆಗಳು, ಭಾರತದ ಗತಿಶೀಲ ಬೆಳವಣಿಗೆ ಮತ್ತು ವಿಕಾಸನಶೀಲ ಪ್ರವಾಸೋದ್ಯಮದೊಂದಿಗೆ, ನಾವು ಅತಿಥಿಗಳಿಗೆ ಅತ್ಯುತ್ತಮ ಮೌಲ್ಯವನ್ನು ನೀಡುವ ಮೂಲಕ ಹಾಸ್ಪಿಟಾಲಿಟಿ ಅನುಭವವನ್ನು ಮರುವ್ಯಾಖ್ಯಾನಿಸಲಿದ್ದೇವೆ ಮತ್ತು ಕ್ಷೇತ್ರದಲ್ಲಿ ಶ್ರೇಷ್ಠತೆಯ ಹೊಸ ಮಾನದಂಡಗಳನ್ನು ಸ್ಥಾಪಿಸಲಿದ್ದೇವೆ.” ಎಂದರು.
ಈ ಒಕ್ಕೂಟವು ಭಾರತದ ಹಾಸ್ಪಿಟಾಲಿಟಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ದಾರಿ ಮಾಡಿಕೊಡಲಿದ್ದು, ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಉನ್ನತ ಮಟ್ಟದ ಸೇವೆಯನ್ನು ಒದಗಿಸುವ ಭರವಸೆಯನ್ನು ನೀಡಿದೆ.