ತುಮಕೂರು: ಡೀಸೆಲ್ ಟ್ಯಾಂಕರ್ ಹಾಗೂ ಕಾಲೇಜು ಬಸ್ ಮಧ್ಯೆ ಭೀಕರ ಅಪಘಾತ ಸಂಭವಿಸಿರುವ ಘಟನೆ ನಡೆದಿದೆ.
ಡೀಸೆಲ್ ಟ್ಯಾಂಕರ್ ನ ಟಾಯರ್ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಕಾಲೇಜ್ ಬಸ್ ಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಡಿಕ್ಕಿ ಹೊಡೆದ ಪರಿಣಾಮ ಟ್ಯಾಂಕರ್ ನಿಂದ ಡೀಸೆಲ್ ಸೋರಿಕೆಯಾಗಿದೆ.
ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ತುಮಕೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48 ಕೋರ ಸರ್ಕಲ್ ಡಾಬಾ ಬಳಿ ಈ ಅವಘಡ ಸಂಭವಿಸಿದೆ. ಟಾಯರ್ ಬ್ಲಾಸ್ಟ್ ಆಗಿ
ಬಲಬದಿಯಿಂದ ಡಿವೈಡರ್ ದಾಟಿ ಎಡಬದಿ ಸಾಗುತ್ತಿದ್ದ ಎಂ.ಎಸ್. ರಾಮಯ್ಯ ಕಾಲೇಜು ವಿದ್ಯಾರ್ಥಿಗಳಿದ್ದ ಬಸ್ ಗೆ ಡಿಕ್ಕಿ ಹೊಡೆದಿದೆ. ಟ್ಯಾಂಕರ್ ಹೊಸಕೋಟೆಯಿಂದ ಬಳ್ಳಾರಿಗೆ ತೆರಳುತ್ತಿತ್ತು. ಬಸ್ ಶಿರಾ ಕಡೆಯಿಂದ ಬೆಂಗಳೂರಿಗೆ ಹೊರಟಿತ್ತು. ಈ ಕುರಿತು ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.