ಮುಂಬೈ: ಅಭಿಷೇಕ್ ಶರ್ಮಾ (135 ರನ್ ಮತ್ತು 2 ವಿಕೆಟ್) ಅವರ ಸ್ಪೋಟಕ ಶತಕದ ನೆರವಿನಿಂದ ಮಿಂಚಿದ ಭಾರತ ತಂಡ, ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಐದನೇ ಇಂಗ್ಲೆಂಡ್ ವಿರುದ್ಧದ ಕೊನೇ ಟಿ20 ಪಂದ್ಯದಲ್ಲಿ 150 ರನ್ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಐದು ಪಂದ್ಯಗಳ ಟಿ20ಐ ಸರಣಿಯನ್ನು 4-1 ಅಂತರದಲ್ಲಿ ಮುಡಿಗೇರಿಸಿಕೊಂಡಿತು. ಟಿ20ಐ ಕ್ರಿಕೆಟ್ನಲ್ಲಿ ಭಾರತ ತಂಡಕ್ಕೆ ಇದು ಎರಡನೇ ದೊಡ್ಡ (ರನ್ಗಳ ಲೆಕ್ಕಾಚಾರದಲ್ಲಿ)ವಿಜಯವಾಗಿದೆ.
ಭಾನುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಐದನೇ ಟಿ20ಐ ಪಂದ್ಯದಲ್ಲಿ ಭಾರತ ತಂಡದ ಯಂಗ್ ಓಪನರ್ ಅಭಿಷೇಕ್ ಶರ್ಮಾ ಸ್ಪೋಟಕ ಬ್ಯಾಟಿಂಗ್ ನಡೆಸಿದರು. ತಾವು ಎದುರಿಸಿದ ಮೊದಲನೇ ಎಸೆತದಿಂದಲೇ ಸ್ಪೋಟಕ ಬ್ಯಾಟಿಂಗ್ಗೆ ಕೈ ಹಾಕಿದರು. ಇಂಗ್ಲೆಂಡ್ ಬೌಲರ್ಗಳನ್ನು ಬಲವಾಗಿ ದಂಡಿಸಿದ ಅವರು, ಕೇವಲ 17 ಎಸೆತಗಳಲ್ಲಿ ಅರ್ಧಶತಕ ಹಾಗೂ 37 ಎಸೆತಗಳಲ್ಲಿ ಭಾರತದ ಪರ ಎರಡನೇ ವೇಗದ ಶತಕ ಬಾರಿಸಿಸಿದರು.
ತಿಲಕ್ ವರ್ಮಾ (24 ರನ್) ಹಾಗೂ ಶಿವಂ ದುಬೆ (30 ರನ್) ಅವರನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮಾಗೆ ಹೆಚ್ಚು ಹೊತ್ತು ಕ್ರೀಸ್ನಲ್ಲಿ ಸಾಥ್ ನೀಡಲಿಲ್ಲ. ಒಂದು ತುದಿಯಲ್ಲಿ ವಿಕೆಟ್ಗಳು ನಿರಂತರವಾಗಿ ಉರುಳಿದರೂ ಮತ್ತೊಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ರನ್ ಹೊಳೆ ಹರಿಸಿದ ಅಭಿಷೇಕ್ ಶರ್ಮಾ, ಕೇವಲ 54 ಎಸೆತಗಳಲ್ಲಿ 13 ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ ಭಾರತದ ಪರ ಟಿ20ಐ ಪಂದ್ಯದಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ 135 ರನ್ ಬಾರಿಸಿದ. ಈ ಮೂಲಕ ಭಾರತ ತಂಡ ತನ್ನ ಪಾಲಿನ 20 ಓವರ್ಗಳ ಮುಕ್ತಾಯಕ್ಕೆ 9 ವಿಕೆಟ್ಗಳ ನಷ್ಟಕ್ಕೆ 247 ರನ್ಗಳನ್ನು ದಾಖಲಿಸಿತು. ಇಂಗ್ಲೆಂಡ್ ತಂಡದ ಪರ ಬ್ರೈಡೆನ್ ಕಾರ್ಸ್ ಮೂರು ವಿಕೆಟ್ ಪಡೆದರೆ, ಮಾರ್ಕ್ ವುಡ್ ಎರಡು ವಿಕೆಟ್ಗಳನ್ನು ಕಬಳಿಸಿದರು.
ಇಂಗ್ಲೆಂಡ್ ಬ್ಯಾಟಿಂಗ್ ವೈಫಲ್ಯ
ದಾಖಲೆಯ ಮೊತ್ತವನ್ನು ಹಿಂಬಾಲಿಸಿದ ಇಂಗ್ಲೆಂಡ್ ತಂಡದ ಪರ ಆರಂಭಿಕ ಫಿಲ್ ಸಾಲ್ಟ್ ಹೊರತುಪಡಿಸಿ ಇನ್ನುಳಿದ ಬ್ಯಾಟ್ಸ್ಮನ್ಗಳು ವೈಫಲ್ಯ ಅನುಭವಿಸಿದರು. ಮೊಹಮ್ಮದ್ ಶಮಿ (25ಕ್ಕೆ 3) ಸೇರಿದಂತೆ ಭಾರತದ ಬೌಲರ್ಗಳ ಪರಿಣಾಮಕಾರಿ ಬೌಲಿಂಗ್ ದಾಳಿ ಎದುರಿಸುವಲ್ಲಿ ವಿಫಲವಾದ ಇಂಗ್ಲೆಂಡ್ ತಂಡ, 10.3 ಓವರ್ಗಳಿಗೆ ಕೇವಲ 97 ರನ್ಗಳಿಗೆ ಆಲ್ಔಟ್ ಆಯಿತು.
ಅರ್ಧಶತಕ ಸಿಡಿಸಿದ ಫಿಲ್ ಸಾಲ್ಟ್
ಕಳೆದ ಪಂದ್ಯಗಳಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಫಿಲ್ ಸಾಲ್ಟ್ ಮುಂಬೈನಲ್ಲಿ ಅಬ್ಬರಿಸಿದರು. ಪ್ರವಾಸಿಗರ ಪರ ಇನಿಂಗ್ಸ್ ಆರಂಭಿಸಿ ಫಿಲ್ ಸಾಲ್ಟ್, ಕೇವಲ 23 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 55 ರನ್ಗಳನ್ನು ಸಿಡಿಸಿದರು.
ವರುಣ್ ಚಕ್ರವರ್ತಿಗೆ ಸರಣಿ ಶ್ರೇಷ್ಠ ಪ್ರಶಸ್ತಿ
ಸರಣಿಯಲ್ಲಿ ವರುಣ್ ಚಕ್ರವರ್ತಿ ಗಮನಾರ್ಹ ಬೌಲಿಂಗ್ ಪ್ರದರ್ಶನವನ್ನು ತೋರಿದ್ದರು. ಈ ಐದು ಪಂದ್ಯಗಳಿಂದ 14 ವಿಕೆಟ್ಗಳನ್ನು ಕಬಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಸ್ವೀಕರಿಸಿದರು. ದಾಖಲೆ ಶತಕ ಸಿಡಿಸಿದ ಅಭಿಷೇಕ್ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.