ಬೆಂಗಳೂರು: ಭಾರತದ ನಾಗರಿಕರ ಪ್ರಮುಖ ಗುರುತಿನ ಚೀಟಿಯಾಗಿರುವ, ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯಲು ಪ್ರಮುಖ ದಾಖಲೆಯಾಗಿರುವ ಆಧಾರ್ ಕಾರ್ಡ್ ಸೇವೆಗಳ ಶುಲ್ಕವು ಅಕ್ಟೋಬರ್ 1ರಿಂದ ಜಾಸ್ತಿಯಾಗಲಿದೆ. ಫಿಂಗರ್ ಪ್ರಿಂಟ್ ಅಪ್ ಡೇಟ್, ವಿಳಾಸ ಬದಲಾವಣೆ ಸೇರಿ ಹಲವು ಸೇವೆಗಳಿಗೆ ಇದುವರೆಗೆ ಪಡೆಯುತ್ತಿದ್ದ ಶುಲ್ಕದಲ್ಲಿ ಏರಿಕೆ ಮಾಡಲಾಗಿದೆ. ಇದು ಅಕ್ಟೋಬರ್ 1ರಿಂದಲೇ ಜಾರಿಗೆ ಬರಲಿದೆ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಮಾಹಿತಿ ನೀಡಿದೆ.
ಯಾವುದಕ್ಕೆ ಎಷ್ಟು ಶುಲ್ಕ?
ಇದುವರೆಗೆ 17 ವರ್ಷ ದಾಟಿದವರು ತಮ್ಮ ಆಧಾರ್ ಕಾರ್ಡ್ ನಲ್ಲಿ ಬೆರಳಚ್ಚು ಅಥವಾ ಫಿಂಗರ್ ಪ್ರಿಂಟ್ ಅಪ್ ಡೇಟ್ ಮಾಡಲು 100 ರೂಪಾಯಿ ಶುಲ್ಕ ಪಾವತಿಸಬೇಕಿತ್ತು. ಈಗ ಇದನ್ನು 125 ರೂಪಾಯಿಗೆ ಹೆಚ್ಚಿಸಲಾಗಿದೆ. ಅಂದರೆ, ಅಕ್ಟೋಬರ್ 1ರಿಂದ ಅಪ್ ಡೇಟ್ ಮಾಡುವವರು 25 ರೂಪಾಯಿ ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ.
ಹಾಗೆಯೇ, ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾವಣೆಗೆ ಇದುವರೆಗೆ 50 ರೂ. ಶುಲ್ಕ ವಿಧಿಸಲಾಗುತ್ತಿದ್ದು, ಈ ಶುಲ್ಕವನ್ನು ಈಗ 75 ರೂ.ಗೆ ಹೆಚ್ಚಿಸಲಾಗುತ್ತಿದೆ. ಅಕ್ಟೋಬರ್ 1 ರಿಂದಲೇ ಹೆಚ್ಚಿಸಿದ ಶುಲ್ಕಗಳು ಜಾರಿಗೆ ಬರುವ ಬಗ್ಗೆ ಯುಐಡಿಎಐ ಮುಖ್ಯ ಕಚೇರಿಯ ಉಪ ನಿರ್ದೇಶಕ ಹಿಮಾಂಶು ಅವರು ದೇಶದ ಎಲ್ಲ ಯುಐಡಿಎಐ ಪ್ರಾದೇಶಿಕ ಕಚೇರಿಗಳಿಗೆ ಸೂಚನೆ ನೀಡಿದ್ದಾರೆ.
ಆದಾಗ್ಯೂ, ಸಾರ್ವಜನಿಕರಿಗೆ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಹಲವು ಸೇವೆಗಳು ಉಚಿತವಾಗಿಯೇ ಸಿಗಲಿವೆ. ಹೊಸ ಆಧಾರ್ ನೋಂದಣಿ ಉಚಿತವಾಗಿರುತ್ತದೆ. 5 ರಿಂದ 7 ವರ್ಷ ವಯಸ್ಸಿನ ಮಕ್ಕಳು ಕಡ್ಡಾಯವಾಗಿ ಬಯೋಮೆಟ್ರಿಕ್ ನವೀಕರಿಸಬೇಕು. ಅವರಿಗೂ ಈ ಸೇವೆಗಳು ಉಚಿತವಾಗಿರುತ್ತವೆ.ಹಾಗೆಯೇ, 15 ರಿಂದ 17 ವರ್ಷ ವಯಸ್ಸಿನವರಿಗೂ ಯಾವುದೇ ಶುಲ್ಕ ಇರುವುದಿಲ್ಲ. ಇದರ ಜತೆಗೆ, ಆಧಾರ್ ಕಾರ್ಡ್ ಅಪ್ ಡೇಟ್ ಗಳನ್ನು ಉಚಿತವಾಗಿ ಮಾಡಲು 2026ರ ಜೂನ್ 14ರವರೆಗೆ ಅವಕಾಶ ನೀಡಲಾಗಿದೆ.