ಬೆಂಗಳೂರು: ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆ ಜನರಿಗೆ ಸಿಗುವ ಸೌಲಭ್ಯಗಳೂ ಅತ್ಯಾಧುನಿಕವಾಗುತ್ತವೆ. ದಾಖಲೆಗಳ ವಿಷಯದಲ್ಲೂ ತಂತ್ರಜ್ಞಾನವು ಮುಂದುವರಿದಿದ್ದು, ಡಿಜಿಲಾಕರ್ ಮೂಲಕ ಯಾವುದೇ ದಾಖಲೆಗಳನ್ನು ಆ್ಯಪ್ ನಲ್ಲಿ ಇಟ್ಟುಕೊಳ್ಳಬಹುದಾಗಿದೆ. ಇದರ ಬೆನ್ನಲ್ಲೇ, ಆಧಾರ್ ಕಾರ್ಡ್ ಗೂ ಕೂಡ ಹೊಸ ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು, ಇದು ಜನರಿಗೆ ಹಾರ್ಡ್ ಕಾಪಿ ಇಟ್ಟುಕೊಳ್ಳುವ ತಲೆನೋವನ್ನೇ ಕಡಿಮೆ ಮಾಡಿದೆ.
ಹೌದು, ಭಾರತೀಯ ವಿಶೇಷ ಗುರುತಿನ ಪ್ರಾಧಿಕಾರವು (UIDAI) ಆಧಾರ್ ಕಾರ್ಡ್ ಬಳಕೆಗಾಗಿ ಹೊಸ ಆ್ಯಪ್ ಅಭಿವೃದ್ಧಿಪಡಿಸಿದೆ. ದೆಹಲಿಯಲ್ಲಿ ನಡೆದ ಆಧಾರ್ ಸಂವಾದ್ ಕಾರ್ಯಕ್ರಮದಲ್ಲಿ ಆಧಾರ್ ಆ್ಯಪ್ ಅನ್ನು ಪ್ರಯೋಗಿಸಲಾಗಿದ್ದು, ಶೀಘ್ರದಲ್ಲೇ ಇದನ್ನು ದೇಶದ ಜನರು ಬಳಸುವಂತೆ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಆ್ಯಪ್ ನಲ್ಲಿ ಏನಿದೆ?
ವಿಮಾನ ನಿಲ್ದಾಣ ಸೇರಿ ಯಾವುದೇ ಕಡೆಗಳಲ್ಲಿ ಹೊಸ ಆಧಾರ್ ಆ್ಯಪ್ ಮೂಲಕವೇ ದೃಢೀಕರಣ ಮಾಡಿಕೊಳ್ಳಬಹುದಾಗಿದೆ. ಆಧಾರ್ ಡೇಟಾ ಹಂಚಿಕೆ, ಆಧಾರ್ ದೃಢೀಕರಣ ಸೇರಿ ಹಲವು ಸೌಕರ್ಯಗಳು ಅಪ್ಲಿಕೇಶನ್ ನಲ್ಲಿ ಇವೆ. ಹಾಗೆಯೇ, ಫೇಸ್ ಅಥೆಂಟಿಕೇಶನ್ ಕೂಡ ಇರುವುದರಿಂದ, ಆಧಾರ್ ಕಾರ್ಡ್ ನಕಲಿ ಮಾಡುವುದನ್ನು ತಡೆಯಲಿದೆ. ಆ್ಯಪ್ ಮೂಲಕವೇ ಬೇರೆಯವರಿಗೆ ಆಧಾರ್ ಕಾರ್ಡ್ ಮಾಹಿತಿ ಕಳುಹಿಸಬಹುದು ಎಂದು ತಿಳಿದುಬಂದಿದೆ.
ನಕಲಿ ಆಧಾರ್ ಕಾರ್ಡ್ ಗಳ ಹಾವಳಿಯನ್ನು ತಡೆಯಲು ಕೂಡ ಹೊಸ ಆಧಾರ್ ಆ್ಯಪ್ ಸಹಕಾರಿಯಾಗಲಿದೆ ಎಂದು ತಿಳಿದುಬಂದಿದೆ. ಹೊಸ ಆಧಾರ್ ಆ್ಯಪ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ವೀಡಿಯೋವನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.