ದೇಶೀಯ ಕ್ರೀಡೆ ರಣಜಿ ಟ್ರೋಫಿ ನಡೆಯುತ್ತಿದ್ದು, ಹಲವಾರು ಪ್ರತಿಭೆಗಳು ಮಿಂಚುತ್ತಿದ್ದಾರೆ. ಗುರುವಾರ ಒಂದೇ ದಿನ ಮೂವರು ತ್ರಿಶತಕ ಸಿಡಿಸಿ ಮಿಂಚಿದರೆ, ಇಂದು ಯುವ ವೇಗಿ ಎಲ್ಲ 10 ವಿಕೆಟ್ ಕಬಳಿಸಿ ದಾಖಲೆ ನಿರ್ಮಿಸಿದ್ದಾರೆ.
ರಣಜಿಯಲ್ಲಿ ಎಲೈಟ್ ಗುಂಪಿನ ಐದನೇ ಸುತ್ತಿನ ಪಂದ್ಯಗಳು ನಡೆಯುತ್ತಿದ್ದು, ರೋಹ್ಟಕ್ ನಲ್ಲಿ ಕೇರಳ ಮತ್ತು ಹರಿಯಾಣ ಮಧ್ಯೆ ಪಂದ್ಯ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕೇರಳ ತಂಡದ ಮೊದಲ ಇನ್ನಿಂಗ್ಸ್ ನಲ್ಲಿ ಹರಿಯಾಣದ ವೇಗದ ಬೌಲರ್ ಅಂಶುಲ್ ಕಾಂಬೋಜ್ ಎಲ್ಲಾ 10 ವಿಕೆಟ್ ಪಡೆದು ಮಿಂಚಿದ್ದಾರೆ. ಈ ಮೂಲಕ ಟೂರ್ನಿಯ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್ ಪಡೆದ ಮೂರನೇ ಬೌಲರ್ ಎಂಬ ದಾಖಲೆ ಬರೆದಿದ್ದಾರೆ.
ಕೇರಳ ವಿರುದ್ಧದ ಈ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 30 ಓವರ್ ಗಳನ್ನು ಬೌಲ್ ಮಾಡಿದ ಅನ್ಶುಲ್ 49 ರನ್ ಗಳನ್ನು ನೀಡಿ 10 ವಿಕೆಟ್ ಪಡೆದಿದ್ದಾರೆ. ರಣಜಿ ಟ್ರೋಫಿ ಇತಿಹಾಸದಲ್ಲಿ 39 ವರ್ಷಗಳ ನಂತರ ಅನ್ಶುಲ್ ಈ ಸಾಧನೆಯನ್ನು ಪುನರಾವರ್ತಿಸಿದ್ದಾರೆ. ಇದಕ್ಕೂ ಮುನ್ನ 1985-86ರ ಸೀಸನ್ ನಲ್ಲಿ ರಾಜಸ್ಥಾನ ವೇಗಿ ಪ್ರದೀಪ್ ಸುಂದರಂ ವಿದರ್ಭ ವಿರುದ್ಧ ಒಂದೇ ಇನ್ನಿಂಗ್ಸ್ನಲ್ಲಿ 78 ರನ್ಗಳಿಗೆ 10 ವಿಕೆಟ್ ಪಡೆದಿದ್ದರು.